

ಪಾಂಡವಪುರ: ತಾಲೂಕಿನ ಚಿನಕುರಳಿಯ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಮಹಾಭಾರತದಲ್ಲಿ ಬರುವ ಸನ್ನಿವೇಶಗಳು ಹಾಗೂ ಕುರುಕ್ಷೇತ್ರ ಯುದ್ಧದ ನೃತ್ಯರೂಪಕ ಪ್ರರ್ಶಿಸಿದರು.
ಪಗಡೆಯಾಟದಲ್ಲಿ ಶಕುನಿಯ ಕುತಂತ್ರಕ್ಕೆ ಬಲಿಯಾಗಿ ಸೋತ ಪಾಂಡವರು ಮಡದಿಯಾದ ದ್ರೌಪದಿಯನ್ನು ಪಣಕ್ಕಿಟ್ಟಾಗ ಕುರುವಂಶದ ದುಶ್ಯಾಶನ ಪಾತ್ರದಾರಿ ದ್ರೌಪದಿ ವಸ್ತ್ರಾಪರಣ ಮಾಡುವುದು, ಶ್ರೀಕೃಷ್ಣ ಸಹಾಯಕ ಬಂದು ಮಾನ ಕಾಪಾಡುವುದು. ತದನಂತರ ಪಾಂಡವರಿಗೆ ಅಂಗೈ ಅಗಲ ಭೂಮಿಯನ್ನು ನೀಡುವುದಿಲ್ಲ ಎಂದು ಹಠಕ್ಕೆ ಬೀಳುವ ದುರ್ಯೋಧನನ ಮೇಲೆ ಪಾಂಡವರು ಯುಧ್ಧ ಮಾಡುವ ಸನ್ನಿವೇಶಗಳನ್ನು ಮಕ್ಕಳು ಅಚ್ಚುಕಟ್ಟಾಗಿ ನಿರ್ವಹಿಸಿದರು. ಅಲ್ಲದೆ, ನೂರಾರು ಮಕ್ಕಳು ರಾಧಾ-ಕೃಷ್ಣನ ವೇಷ ತೊಟ್ಟು ತೊದಲು ನುಡಿಗಳಲ್ಲಿ ಶ್ರೀಕೃಷ್ಣನ ಧರ್ಮ ಕಾರ್ಯಗಳನ್ನು ವ್ಯಾಖ್ಯಾನಿಸಿ ಪಾಲಕರಿಗೆ ಖುಷಿಕೊಟ್ಟರು.
ಕಾರ್ಯಕ್ರಮದಲ್ಲಿ ಬಿಜಿಎಸ್ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಮಕ್ಕಳು ಶ್ರೀಕೃಷ್ಣನ ಆದರ್ಶಗಳನ್ನು ಪಾಲನೆ ಮಾಡುವ ಮೂಲಕ ಸಮಾಜದಲ್ಲಿ ಧರ್ಮ ಮಾರ್ಗದಲ್ಲಿ ನಡೆಯಬೇಕು. ವಿಷ್ಣುವಿನ ಹಲವು ಅವತಾರಗಳಲ್ಲಿ ಶ್ರೀಕೃಷ್ಣನ ಅವತಾರವು ಸಹ ಒಂದಾಗಿದೆ. ಧರ್ಮ ಸ್ಥಾಪನೆಗಾಗಿ ಜನ್ಮತಾಳಿದ ಅವರು ದುಷ್ಟರನ್ನು ಶಿಕ್ಷಿಸಿ, ಶಿಷ್ಟರ ರಕ್ಷಕರಾಗಿದ್ದರು. ಅದಕ್ಕಾಗಿಯೇ ಅವರು ಕುರುಕ್ಷೇತ್ರ ಯುದ್ಧದಲ್ಲಿ ಧರ್ಮದ ಪರವಾರವಾಗಿದ್ದ ಪಾಂಡವರ ಕಡೆಗೆ ನಿಂತು ಕೌರವರನ್ನು ಸಂಹರಿಸಿದರು ಎಂದರು.
ಮಕ್ಕಳನ್ನು ಶ್ರೀಕೃಷ್ಣ-ರಾಧೆಯ ವೇಷದಲ್ಲಿ ನೋಡಿ ನಿಜವಾದ ಕೃಷ್ಣನನ್ನೇ ನೋಡಿದ್ದಷ್ಟು ಖುಷಿಯಾಗಿದೆ. ಮನೆಗಳಲ್ಲಿ ಮಕ್ಕಳು ತುಂಟಾಟ, ಚೇಷ್ಟೆ ಮಾಡುವುದು ಸಾಮಾನ್ಯ. ಅದಕ್ಕಾಗಿ ಪಾಲಕರು ಮಕ್ಕಳ ಮೇಲೆ ಸಿಟ್ಟಾಗಬಾರದು. ತುಂಟಾಟವಾಡುವ ಮಕ್ಕಳು ಸದಾ ಆರೋಗ್ಯವಾಗಿರುತ್ತಾರೆ. ಹೀಗಾಗಿ ಪಾಲಕರು ಮಕ್ಕಳ ತುಂಟಾಟ ನೋಡಿ ಖುಷಿಪಡಬೇಕು ಎಂದರು.
ಬಿಜಿಎಸ್ ಶಿಕ್ಷಣ ಸಂಸ್ಥೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒತ್ತು ನೀಡುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಮಕ್ಕಳ ವೇಷಭೂಷಣ ಸ್ಪರ್ಧೆಗಾಗಿ ಪಾಲಕರು ಸಾಕಷ್ಟು ಶ್ರಮಿಸಿದ್ದಾರೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಸಹಕಾರ ಸದಾ ನಮ್ಮ ಸಂಸ್ಥೆಯ ಮೇಲಿರಲಿ. ಮುಂದಿನ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಪಾಲಕರು ಸಹ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಶ್ರೀಕೃಷ್ಣ-ರಾಧೆ ವೇಷಧಾರಿಗಳು ಹಲವು ಹಾಡಿಗೆ ನೃತ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಉತ್ತಮ ಕೃಷ್ಣ-ರಾಧೆ ವೇಷಧಾರಿಗಳಿಗೆ ಬಹುಮಾನ ವಿತರಿಸಲಾಯಿತು.
ಗ್ರಾಪಂ ಮಾಜಿ ಸದಸ್ಯ ಸಿ.ಡಿ.ಮಹದೇವು, ಬಿ.ಎಸ್.ಜಯರಾಮು, ಚನ್ನಮಾದೇಗೌಡ, ಎಸ್.ರಾಜು, ಎಸ್.ನಾಗಸುಂದರ್, ಎಸ್.ರವಿಕುಮಾರ್, ಶ್ರೀಕಾಂತ್, ಪ್ರಾಂಶುಪಾಲ ಚಿದಂಬರ ಇತರರು ಇದ್ದರು.