

ಮಂಗಳೂರು : ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಅಟಲ್ ಪಿಂಚಣಿ ಯೋಜನೆಯನ್ನು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್( ಎಸ್‌ಸಿಡಿಸಿಸಿ ಬ್ಯಾಂಕ್) ನ ಸಾಧನೆಗೆ ಕೇಂದ್ರ ಸರ್ಕಾರದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಪ್ರಶಂಸೆ ವ್ಯಕ್ತಪಡಿಸಿದೆ.
ಅಟಲ್ ಪಿಂಚಣಿ ಯೋಜನೆಯಡಿ 2023-24ನೇ ಸಾಲಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ಪ್ರತಿ ಶಾಖೆಗೆ 20 ಚಂದಾದಾರರ ದಾಖಲಾತಿಯನ್ನು ನೀಡಿದ್ದು, ಅದರಂತೆ ಬ್ಯಾಂಕ್ ತನ್ನ 111 ಶಾಖೆಗಳಿಗೆ ಒಟ್ಟು 2220 ಚಂದಾದಾರರನ್ನು ನೋಂದಾಯಿಸುವ ಗುರಿ ನೀಡಿತ್ತು. ಬ್ಯಾಂಕ್ ಈಗ ಎಲ್ಲ ಶಾಖ್ಳೆ ಮೂಲಕ ಒಟ್ಟು 2960 ಚಂದಾದಾರರನ್ನು ನೋಂದಾಯಿಸಿ ಗುರಿ ಮೀರಿದ ಸಾಧನೆ ಮಾಡಿದೆ.
ಎಸ್‌ಸಿಡಿಸಿಸಿ ಬ್ಯಾಂಕ್ ತನ್ನ ಸಾಮೂಹಿಕ ಪ್ರಯತ್ನ ಮತ್ತು ಅನುಕರಣೀಯ ಕಾರ್ಯನಿರ್ವಹಣೆಯಿಂದಾಗಿ ಅಟಲ್ ಪಿಂಚಣಿ
ಯೋಜನೆಯಲ್ಲಿ ನಿಗದಿಪಡಿಸಲಾದ ವಾರ್ಷಿಕ ದಾಖಲಾತಿ ಗುರಿಯನ್ನು ಸಾಧಿಸಿದ್ದಕ್ಕಾಗಿ ಕೇಂದ್ರ ಸರ್ಕಾರದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಬ್ಯಾಂಕಿನ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಅಭಿನಂದಿಸಿದೆ.
ಕೇಂದ್ರ ಸರ್ಕಾರದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬ್ಯಾಂಕಿಗೆ ಪ್ರಶಂಸನಾ ಪತ್ರ ಬಂದಿದ್ದು, ಈ ಪತ್ರದಲ್ಲಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ನಾಯಕತ್ವ ಮತ್ತು ಕಾರ್ಯತಂತ್ರದ ವಿಧಾನವು ಈ ಸಾಧನೆಯ ಯಶಸ್ಸಿನಲ್ಲಿ
ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂದು ತಿಳಿಸಿದೆ.
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕೋರಿಕೆಯಂತೆ ಎಸ್‌ಸಿಡಿಸಿಸಿ ಬ್ಯಾಂಕ್ 2019ರ ಜನವರಿ 11ರಂದು ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದು ಅದರಂತೆ ಬ್ಯಾಂಕಿನ ಪ್ರತಿ ಶಾಖೆಯಲ್ಲೂ ಅಟಲ್ ಪಿಂಚಣಿ ಯೋಜನೆಗೆ ಚಂದಾದಾರರನ್ನು ನೋಂದಾಯಿಸುವ ಗುರಿಯನ್ನು ಪ್ರತಿ ವರ್ಷ ನೀಡಲಾಗಿತ್ತು ಎಂದು ಪ್ರಕಟಣೆ ತಿಳಿಸಿದೆ.