

ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ 113 ಶಾಖೆಗಳನ್ನು ಹೊಂದಿರುವ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗ್ರಾಹಕರಿಗೆ ಸಮರ್ಪಕ ಸೇವೆ ಒದಗಿಸುವ ಮೂಲಕ ವಾಣಿಜ್ಯ ಬ್ಯಾಂಕ್‌ಗಳಿಗೆ ಸ್ಪರ್ಧೆ ನೀಡುತ್ತಿದೆ. 110 ವರ್ಷಗಳ ಇತಿಹಾಸ ಹೊಂದಿರುವ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವ ಸಾಧನೆ ಮಾಡಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರಕುಮಾರ್ ಹೇಳಿದರು.
ಎಸ್‌ಸಿಡಿಸಿಸಿ ಬ್ಯಾಂಕ್‌ನ ಕೋಡಿಕಲ್ ಸ್ಥಳಾಂತರಿತ ಶಾಖೆಯನ್ನು ನಗರದ ಉರ್ವ ಮಾರಿಗುಡಿ ರಸ್ತೆಯಲ್ಲಿರುವ ‘ಶ್ರೀನಿಧಿ ರಾಮದೇವ್ ರೆಸಿಡೆನ್ಸಿ’ ಕಟ್ಟಡದ ನೆಲ ಅಂತಸ್ತಿನಲ್ಲಿ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಕೃಷಿಕರು ಪಡೆದ ಸಾಲ ಕಳೆದ 28 ವರ್ಷಗಳಿಂದ ಶೇ.100ರಷ್ಟು ಮರು ಪಾವತಿಯಾಗುತ್ತಿದೆ. ಗ್ರಾಮಾಂತರ ಪ್ರದೇಶದ ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ ನವೋದಯ ಸ್ವಸಹಾಯ ಸಂಘಗಳ ಮೂಲಕ ಸಾಲದ ವ್ಯವಸ್ಥೆ ಮಾಡಿದ್ದು, ಶೇ.99. 50ರಷ್ಟು ಮರು ಪಾವತಿಯಾಗುತ್ತಿದೆ. ಕರಾವಳಿಯಲ್ಲಿ ಸಾಲ ದೊರೆಯದ ಕಾರಣಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಇಲ್ಲ ಎಂದು ಅವರು ಹೇಳಿದರು.
2011ರಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ನ 55ನೇ ಶಾಖೆಯಾಗಿ ಕೋಡಿಕಲ್ ಶಾಖೆ ಆರಂಭಗೊಂಡಿತ್ತು. ಜನರ ಅನುಕೂಲಕ್ಕಾಗಿ ಈಗ ಶಾಖೆಯನ್ನು ಸ್ಥಳಾಂತರಗೊಳಿಸಲಾಗಿದೆ. ಕೋಡಿಕಲ್ ಶಾಖೆಯಲ್ಲಿ 49 ಕೋಟಿ ರೂ. ಠೇವಣಾತಿಯಿದ್ದು, , 92 ಕೋಟಿ ರೂ. ಸಾಲ ನೀಡಲಾಗಿದೆ. ನೂತನ ಸ್ಥಳಾಂತರಿತ ಶಾಖೆಯಲ್ಲಿ ಹೊಸ 16 ನವೋದಯ ಸ್ವಸಹಾಯ ಸಂಘಗಳ ರಚನೆಯಾಗಿದೆ ಎಂದು ಡಾ. ಎಂಎನ್‌ಆರ್ ತಿಳಿಸಿದರು.
*ಡಾ. ಎಂಎನ್‌ಆರ್ ದಕ್ಷ ನೇತ್ರತ್ವ :
ಮುಖ್ಯ ಅತಿಥಿಯಾಗಿದ್ದ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ ‘ ಡಾ. ಎಂ. ಎನ್. ರಾಜೇಂದ್ರಕುಮಾರ್ ಅವರ ದಕ್ಷ ನೇತ್ರತ್ವದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಸಹಕಾರ ಬ್ಯಾಂಕಿಂಗ್ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು ಅದ್ವಿತೀಯ ಸಾಧನೆ ಮಾಡಿದೆ. ಜಿಲ್ಲೆಯ ರೈತರು ಕ್ಲಪ್ತ ಸಮಯದಲ್ಲಿ ಸಾಲ ಮರು ಪಾವತಿ ಮಾಡುವ ಮೂಲಕ ಬ್ಯಾಂಕ್ ಅಭಿವೃದ್ಧಿಗೆ ನೆರವಾಗಿದ್ದಾರೆ. ಬ್ಯಾಂಕ್‌ನ ಕೋಡಿಕಲ್ ಶಾಖೆ ಗ್ರಾಹಕರ ಅನುಕೂಲಕ್ಕಾಗಿ ಸ್ಥಳಾಂತರಗೊಂಡಿದ್ದು, ಜನತೆ ಇದರ ಸದುಪಯೋಗ ಪಡೆದು ಬ್ಯಾಂಕ್‌ಗೆ ಸಹಕಾರ ನೀಡಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಕಾರ್ಪೋರೇಟರ್ ಗಣೇಶ್ ಕುಲಾಲ್ , ಶಾಖಾ ಕಟ್ಟಡದ ಮಾಲಕ ಶಿವಪ್ರಸಾದ್ ಕಟ್ಟ ಶುಭ ಹಾರೈಸಿದರು.
ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಬ್ಯಾಂಕ್ ನಿರ್ದೇಶಕರಾದ ಭಾಸ್ಕರ್ ಎಸ್. ಕೋಟ್ಯಾನ್, ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ. ಜಯರಾಮ ರೈ, ದೇವಿಪ್ರಸಾದ್ ಶೆಟ್ಟಿ ಬೆಳಪು, ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಹರಿಶ್ಚಂದ್ರ, ಜೈರಾಜ್ ಬಿ.ರೈ, ಅಶೋಕ್ ಕುಮಾರ್ ಶೆಟ್ಟಿ, ಮುಖ್ಯ
ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ವಕೀಲ ಶಶಿರಾಜ್ ಕಾವೂರು ಕಾರ್ಯಕ್ರಮ ನಿರೂಪಿಸಿದರು.