

ಚೇತನ್ ಚಕ್ಕೆರೆ, ಬಿಡದಿ
ಕಾರ್ಖಾನೆಗಳ ಪ್ಲಾಸ್ಟಿಕ್ ತ್ಯಾಜ್ಯವನ್ನು ತಾಳಗುಪ್ಪೆ- ಹೊಸದೊಡ್ಡಿ ಗ್ರಾಮದ ಬಳಿ ಜಮೀನುಗಳಲ್ಲಿ ಸುರಿದು ರಾತ್ರೋರಾತ್ರಿ ಬೆಂಕಿ ಹಚ್ಚಲಾಗುತ್ತಿದ್ದು, ಪರಿಸರ ಮಾಲಿನ್ಯದ ಜತೆ ಕೃಷಿ ಮೇಲೂ ದುಷ್ಪರಿಣಾಮ ಬೀರಲಾರಂಭಿಸಿದೆ.
ಬಿಡದಿ ಕೈಗಾರಿಕಾ ಪ್ರದೇಶದ 2ನೇ ಹಂತದಲ್ಲಿರುವ ಹಲವು ಕಾರ್ಖಾನೆಗಳಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯ ಸೇರಿ ಇತರ ವಸ್ತುಗಳನ್ನು ಜಮೀನುಗಳಲ್ಲಿ ಹಾಕುವುದಲ್ಲದೇ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದಾಗಿ ದಟ್ಟ ಹೊಗೆ ಹಾಗೂ ಕೆಟ್ಟ ವಾಸನೆ ಬರುತ್ತಿದ್ದು ಉಸಿರಾಡಲು ಕಷ್ಟವಾಗಿ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬಿಡದಿ ಕೈಗಾರಿಕಾ ಪ್ರದೇಶಕ್ಕೆ ತಾಳಗುಪ್ಪೆ ಗ್ರಾಮ ಹತ್ತಿರವಿರುವ ಕಾರಣದಿಂದಾಗಿ ಕಾರ್ಖಾನೆ ತ್ಯಾಜ್ಯ ಸೇರಿ ಮನೆಯ ಕಸ ಹಾಕಲು ಈ ಗ್ರಾಮಗಳನ್ನು ಆಯ್ದುಕೊಂಡಿದ್ದಾರೆ. ಲಾರಿಯಲ್ಲಿ ಕಾರ್ಖಾನೆಗಳ ತ್ಯಾಜ್ಯವನ್ನು ರಾತ್ರಿ ವೇಳೆ ಗ್ರಾಮದ ಕೂಗಳತೆ ದೂರಕ್ಕೆ ತಂದು ಸುರಿದು ಬೆಂಕಿ ಹಚ್ಚಿ ಹೋಗುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಪ್ಲಾಸ್ಟಿಕ್ ಸುಟ್ಟ ವಾಸನೆ ಆವರಿಸಿ ಗ್ರಾಮಸ್ಥರಿಗೆ ಕಿರಿಕಿರಿ ಉಂಟು ಮಾಡಿದೆ.
ಖಾಲಿ ಜಮೀನುಗಳೇ ಟಾರ್ಗೆಟ್: ಬೆಂಗಳೂರಿಗೆ ಬಿಡದಿ ಸಮೀಪವಿರುವ ಕಾರಣ ಬೆಂಗಳೂರಿಗರು ಬಿಡದಿ ಅಕ್ಕಪಕ್ಕದ ಗ್ರಾಮಗಳಲ್ಲಿ ಜಾಗ ಖರೀದಿಸುತ್ತಿದ್ದಾರೆ. ಅದೇರೀತಿ ತಾಳಗುಪ್ಪೆ ಗ್ರಾಮದಲ್ಲಿಯೂ ಜಮೀನು ಖರೀದಿಗೆ ಮುಂದಾಗಿದ್ದಾರೆ. ಖರೀದಿ ನಂತರ ಜಾಗವನ್ನು ಪಾಳುಬಿಟ್ಟ ಕಾರಣ ಇದನ್ನೇ ಬಂಡವಾಳ ಮಾಡಿಕೊಂಡು ತ್ಯಾಜ್ಯ ಸುರಿಯುತ್ತಿದ್ದಾರೆ.
ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳು ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಬೇಕೆಂಬ ನಿಯಮ ಇದೆ. ಆದರೆ ಈ ನಿಯಮಗಳನ್ನು ಗಾಳಿಗೆ ತೂರಿರುವ ಕಾರ್ಖಾನೆಗಳು ಕಸ ಸುರಿಯಲು ವಾಮಮಾರ್ಗ ಕಂಡುಕೊಂಡಿದ್ದಾರೆ. ಜತೆಗೆ ತ್ಯಾಜ್ಯ ವಿಲೇವಾರಿ ಮಾಡಲೆಂದೇ ಕೆಲ ಮಧ್ಯವರ್ತಿಗಳ ತಂಡವಿದ್ದು ಇವರು ಕಾರ್ಖಾನೆಗಳ ತ್ಯಾಜ್ಯ ಸಂಗ್ರಹಿಸಿಡುತ್ತಾರೆ. ತ್ಯಾಜ್ಯದ ರಾಶಿ ಜಾಸ್ತಿಯಾಗುತ್ತಲೇ ಲಾರಿಯಲ್ಲಿ ಲೋಡ್ ಮಾಡಿಕೊಂಡು ಪಾಳು ಬಿದ್ದ ಜಾಗಗಳಲ್ಲಿ ಸುರಿದು ಹೋಗುತ್ತಿದ್ದಾರೆ.
ಪ್ಲಾಸ್ಟಿಕ್ ತ್ಯಾಜ್ಯವನ್ನು ಸುಡುವುದರಿಂದ ಗ್ರಾಮಸ್ಥರಿಗೆ ಸಮಸ್ಯೆಯಾಗಿದೆ. ಕೇವಲ ತಾಳಗುಪ್ಪೆ ಗ್ರಾಮ ಅಲ್ಲದೇ, ಪಕ್ಕದ ಹೊಸದೊಡ್ಡಿ ಗ್ರಾಮಸ್ಥರಿಗೂ ಇದರ ಪರಿಣಾಮ ತಟ್ಟಿದೆ. ತಡರಾತ್ರಿ ಲಾರಿಗಳಲ್ಲಿ ಕಸ ತಂದು ಖಾಲಿ ಜಮೀನುಗಳಲ್ಲಿ ಸುರಿದು ಬೆಂಕಿ ಹಚ್ಚುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ದಟ್ಟ ಹೊಗೆ ಹಾಗೂ ಕೆಟ್ಟ ವಾಸನೆಯಿಂದ ಗ್ರಾಮಸ್ಥರು ಕಾಯಿಲೆಗಳಿಗೆ ಈಡಾಗುತ್ತಿದ್ದಾರೆ.
ತಾಳಗುಪ್ಪೆ ಹಾಗೂ ಹೊಸದೊಡ್ಡಿ ಗ್ರಾಮಗಳ ನಡುವೆ ಇರುವ ಜಮೀನುಗಳಿಗೆ ರಾತ್ರಿ ವೇಳೆ ಲಾರಿಗಳ ಮೂಲಕ ಪ್ಲಾಸ್ಟಿಕ್ ತ್ಯಾಜ್ಯ ತಂದು ಸುರಿದು ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದ ಎರಡು ಗ್ರಾಮದ ಜನರಿಗೆ ಸಮಸ್ಯೆಯಾಗುತ್ತಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲ.ರವಿರಾಜ್, ಹೊಸದೊಡ್ಡಿ