

ಕಾರವಾರ: ರಾಜ್ಯದಲ್ಲಿ ಅತ್ಯಧಿಕ ಅರಣ್ಯವಿರುವ ಜಿಲ್ಲೆಗಳಲ್ಲೊಂದು ಹೆಸರಾದ ಉತ್ತರ ಕನ್ನಡದಲ್ಲಿ ಅಂತ್ಯಸಂಸ್ಕಾರಕ್ಕೂ ಕಟ್ಟಿಗೆಯ ಅಭಾವ ಉಂಟಾಗುತ್ತಿದೆ.
ಹೌದು, ಅರಣ್ಯ ನಿಗಮದಿಂದ ನಡೆಸುವ ಕಟ್ಟಿಗೆ ಡಿಪೋಗಳಲ್ಲಿ ಕೆಲವೆಡೆ ಕಟ್ಟಿಗೆ ಸಂಗ್ರಹವಿಲ್ಲ. ಇದರಿಂದ ಅಂತ್ಯಸಂಸ್ಕಾರಕ್ಕೆ ಕಟ್ಟಿಗೆ ಬೇಕು ಎಂದರೆ ಜನ ಅಲೆದಾಡುವಂತಾಗಿದೆ.
ಈ ಕುರಿತು ಮಾಜಿ ಶಾಸಕಿ ರೂಪಾಲಿ ನಾಯ್ಕ ಧ್ವನಿ ಎತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಇಲಾಖೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವಕಟ್ಟಿಗೆ ಡಿಪೋದಲ್ಲಿ ಶವ ಸಂಸ್ಕಾರಕ್ಕೂ ಕಟ್ಟಿಗೆ ಸಿಗದೆ ಇರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಕೂಡಲೇ ಅಗತ್ಯ ಇರುವವರಿಗೆ ಕಟ್ಟಿಗೆ ಸಿಗುವಂತೆ ವ್ಯವಸ್ಥೆ ಕಲ್ಪಿಸಬೇಕು.
ಭಾರೀ ಮಳೆ, ಪ್ರವಾಹದಿಂದ ಜನತೆ ತೊಂದರೆಗೊಳಗಾಗಿದ್ದಾರೆ. ಈ ನಡುವೆ ಮೃತಪಟ್ಟವರ ಅಂತಿಮ ಸಂಸ್ಕಾರಕ್ಕೂ ಕಟ್ಟಿಗೆ ದೊರೆಯದೆ ಕುಟುಂಬದವರು ಪರದಾಡುವಂತಾಗಿದೆ.
ಯಾರಾದರೂ ನಿಧನರಾದಾಗ ಮೊದಲೆ ತಮ್ಮವರನ್ನು ಕಳೆದುಕೊಂಡ ನೋವಿನಲ್ಲಿ ಆ ಕುಟುಂಬದವರಿರುತ್ತಾರೆ. ಅಂತಹ ಸಂದರ್ಭದಲ್ಲಿ ಕಟ್ಟಿಗೆಗಾಗಿ ಓಡಾಡುವ ದುಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ ಕುಟುಂಬದವರು ಇನ್ನಷ್ಟು ಹತಾಶರಾಗಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಅಂತಹ ಸಂದರ್ಭದಲ್ಲಿ ಮಾನವೀಯತೆ ದೃಷ್ಟಿಯಿಂದ ನೋಡಿ ಕಟ್ಟಿಗೆ ವ್ಯವಸ್ಥೆ ಮಾಡಬೇಕಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ತಲ್ಲಣ ತಡೆಗೆ ದೇವರ ನಾಮಸ್ಮರಣೆ ಅಗತ್ಯ
ನಮ್ಮದು ಅರಣ್ಯವೇ ಹೆಚ್ಚಿರುವ ಜಿಲ್ಲೆ. ಈ ನಾಡಿಗೆ ಅರಣ್ಯ ಉತ್ಪನ್ನವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗುತ್ತದೆ. ಈ ಜಿಲ್ಲೆಯಲ್ಲಿರುವ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಶವ ಸಂಸ್ಕಾರಕ್ಕೂ ಕಟ್ಟಿಗೆ ಬರ ಎದುರಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದಿದ್ದಾರೆ.