

ಶಿವಮೊಗ್ಗ: ಚೌಡಮ್ಮ, ಮಾರಮ್ಮ, ಆಂಜನೇಯನಿಗೆ ಒಂದಿಂಚು ಭೂಮಿ ನೀಡದ ರಾಜ್ಯ ಸರ್ಕಾರ ವಕ್ಫ್ ಮಂಡಳಿಗೆ ಸಾವಿರಾರು ಎಕರೆ ಜಾಗವನ್ನು ಧಾರೆ ಎರೆಯುತ್ತಿದೆ. ಮೊಘಲರ ಕಾಲದಲ್ಲ್ಲೂ ಇಂತಹ ಆಳ್ವಿಕೆ ಇರಲಿಲ್ಲ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಕಿಡಿಕಾರಿದರು.
ಜಿಲ್ಲಾ ಬಿಜೆಪಿಯಿಂದ ವಕ್ಫ್ ಮಂಡಳಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತುಷ್ಟೀಕರಣಕ್ಕೂ ಒಂದು ಮಿತಿ ಇರಬೇಕು. ಆದರೆ ಕಾಂಗ್ರೆಸ್ ಆ ಮಿತಿಯನ್ನು ದಾಟಿದೆ. ಎಲ್ಲಿ ಮುಸ್ಲಿಂ ಮತಗಳು ಕೈ ತಪ್ಪುತ್ತದೋ ಎಂಬ ಕಾರಣದಿಂದ ವಕ್ಫ್ ಮೂಲಕ ಭೂಮಿ ನೀಡಿ ಆ ಸಮುದಾಯವನ್ನು ಸಂತೈಸಲು ಯತ್ನಿಸುತ್ತಿದೆ ಎಂದು ದೂರಿದರು.
ಮಠ, ಮಂದಿರ, ರೈತರ ಭೂಮಿ, ಸರ್ಕಾರಿ ಭೂಮಿ, ಸ್ಮಶಾನ ಎಲ್ಲವೂ ವಕ್ಫ್ ಆಸ್ತಿಯಾಗುತ್ತಿದೆ. ಇದು ಲ್ಯಾಂಡ್ ಜಿಹಾದ್. ಹಿಂದುಗಳ ಆಸ್ತಿ ಕಬಳಿಸುವ ಹುನ್ನಾರ ಇದಾಗಿದೆ. ಅವರಿಗೆ (ಮುಸ್ಲಿಂ) ನೀಡಬೇಕಾದ್ದನ್ನು 1947ರಲ್ಲೇ ನೀಡಿದ್ದೇವೆ. ಪಾಕಿಸ್ತಾನಕ್ಕೆ ಹೋಗಲು ಧೈರ್ಯ ಇಲ್ಲದೇ ಇಲ್ಲಿಯೇ ಉಳಿದವರು ಈಗ ಇಲ್ಲಿ ಹಿಂದುಗಳ ಜಾಗಕ್ಕೆ ಕೈ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊಸ ಸಂಸತ್ ಭವನ ನಿರ್ಮಾಣ ಮಾಡಿದ ಜಾಗವನ್ನೂ ವಕ್ಫ್ ನಮ್ಮದೆಂದಿತು. ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರಿನ ಈದ್ಗಾ ಮೈದಾನವನ್ನೂ ಈಗ ವಕ್ಫ್ ತಮ್ಮದೆಂದು ಹೇಳಿಕೊಳ್ಳುತ್ತಿದೆ. ಹಿಂದುಗಳಿಗೆ ಒಂದು ಕಾನೂನು, ಮುಸ್ಲಿಂರಿಗೆ ಇನ್ನೊಂದು ಕಾನೂನು ಎಂದಾಗಲು ಬಿಜೆಪಿ ಬಿಡುವುದಿಲ್ಲ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಿ.ಎಚ್.ಮಾಲತೇಶ್, ಎಂ.ಬಿ.ಹರಿಕೃಷ್ಣ, ನಗರಾಧ್ಯಕ್ಷ ಡಿ.ಮೋಹನ್ ರೆಡ್ಡಿ, ಪಾಲಿಕೆ ಮಾಜಿ ಸದಸ್ಯರಾದ ಸುರೇಖಾ ಮುರಳೀಧರ್, ಅನಿತಾ ರವಿಶಂಕರ್, ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಮಂಗಳಾ ನಾಗೇಂದ್ರ ಮುಂತಾದವರು ಪಾಲ್ಗೊಂಡಿದ್ದರು.