

ಮಡಿಕೇರಿ:
ಡಿಆರ್‌ಡಿಒಗೆ ಸಂಬಂಧಿಸಿದ ವಸ್ತು ಎಂದು ತೋರಿಸಿ ಕೇರಳದ ವ್ಯಕ್ತಿಗೆ ೧೪ ಲಕ್ಷರೂ. ವಂಚಿಸಿರುವುದಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳದ ವಯನಾಡ್ ಜಿಲ್ಲೆ ಕಲ್ಪೆಟ್ಟಾ ನಿವಾಸಿ ಎಂ.ಕೆ. ಪ್ರಮೋದ್ ಕುಮಾರ್ ವಂಚನೆಗೆ ಒಳಗಾಗಿರುವ ವ್ಯಕ್ತಿ. ಮಡಿಕೇರಿ ತಾಲೂಕು ನಾಪೋಕ್ಲು ನಿವಾಸಿ ಪಿ.ಎ. ಆಹ್ಮದ್ ಮತ್ತು ಚೇರಂಬಾಣೆ ನಿವಾಸಿ ರಘು ಎಂಬವರಿಗೆ ಭೂವ್ಯವಹಾರದ ಸಂಬಂಧ ಪ್ರಮೋದ್ ಕುಮಾರ್ ಪರಿಚಯ ಆಗಿದ್ದರು. ಈ ಪರಿಚಯದ ಮೇಲೆ ಪಿ.ಎ. ಆಹ್ಮದ್ ಮತ್ತು ರಘು ಮಡಿಕೇರಿಯ ಹೊಟೇಲ್ ಒಂದಕ್ಕೆ ಪ್ರಮೋದ್ ಕುಮಾರ್ ಅವರನ್ನು ಕರೆದುಕೊಂಡು ಹೋಗಿ ಯಾವುದೋ ವಸ್ತುವನ್ನು ತೋರಿಸಿ, ಇದು ಡಿ.ಆರ್.ಡಿ.ಒ.ಗೆ ಸಂಬಂಧಿಸಿದ ವಸ್ತು. ಇದನ್ನು ಮಾರಾಟ ಮಾಡಿದ ನಂತರ ಶೇ. ೫ ರಂತೆ ಹಣ ನೀಡುವುದಾಗಿ ಹೇಳಿದ್ದಾರೆ. ಡಿಆರ್‌ಡಿಒ ಅಧಿಕಾರಿಗಳು ಬಂದು ಹೋಗಲು ಬೇಕಾಗುವ ಖರ್ಚು ವೆಚ್ಚಕ್ಕೆ ೨೦ ಲಕ್ಷ ರೂ. ಹಣ ಬೇಕೆಂದು ಕೂಡ ನಂಬಿಸಿದ್ದಾರೆ. ಇದನ್ನು ನಂಬಿದ ಎಂ.ಕೆ. ಪ್ರಮೋದ್ ೨೦೨೩ರ ನ.೩೦ರಿಂದ ೨೦೨೪ರ ಮೇ ೨೯ರ ತನಕ ವಿವಿಧ ದಿನಾಂಕಗಳಲ್ಲಿ ಒಟ್ಟು ೧೩,೯೭,೦೦೦ ಲಕ್ಷ ರೂ.ಗಳನ್ನು ಆರೋಪಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ. ಇದೀಗ ಮೋಸ ಹೋಗಿರುವುದು ಅರಿವಾದ ನಂತರ ಪೊಲೀಸರ ಮೊರೆ ಹೋಗಿದ್ದು ಪ್ರಮೋದ್ ನೀಡಿದ ದೂರಿನ ಅನ್ವಯ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.