

ಚಿಕ್ಕಬಳ್ಳಾಪುರ: ಐದು ವರ್ಷಗಳ ಹಿಂದೇ ಸ್ಥಗಿತಗೊಳಿಸಲಾಗಿರುವ ಪುರಸಭೆ ಕೈ ಬರಹದ ಖಾತೆ ನಕಲು ದಾಖಲೆಗಳ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿರುವ ಆರೋಪ ಕೇಳಿ ಬಂದಿದೆ. ಮಧ್ಯವರ್ತಿಗಳ ಮೋಸಕ್ಕೆ ಮಾರುಹೋಗಿ ಮನೆ ಮತ್ತು ನಿವೇಶನದ ಕೈ ಬರಹದ ಖಾತೆ ನಕಲು ದಾಖಲೆಗಳನ್ನು ಕಾಳಸಂತೆಯಲ್ಲಿ ಪಡೆದುಕೊಂಡು ಅಮಾಯಕ ನಾಗರಿಕರು ಮೋಸಹೋಗುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಬಾಗೇಪಲ್ಲಿ ಪುರಸಭೆ ಕಾರ್ಯಾಲಯದಲ್ಲಿ ಹಲವು ವರ್ಷಗಳ ಹಿಂದೆ ಕೆಲ ಅಧಿಕಾರಿಗಳು, ಸದಸ್ಯರು ಮಾಡಿರುವ ತಪ್ಪುಗಳನ್ನು ನೆಪವಾಗಿ ಇಟ್ಟುಕೊಂಡು, ಪಟ್ಟಣದ 30 ಸಾವಿರ ನಾಗರಿಕರ ಮನೆ ಮತ್ತು ನಿವೇಶನಗಳ ಖಾತೆ ಬದಲಾವಣೆ ಹಾಗೂ ಇ ಖಾತೆಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಇತ್ಯರ್ಥಗೊಳಿಸಿಲ್ಲ. ಆಡಳಿತ ಯಂತ್ರಾಂಗದ ಅವೈಜ್ಞಾನಿಕ ತೀರ್ಮಾನವನ್ನೇ ಬಂಡವಾಳನ್ನಾಗಿ ಮಾಡಿಕೊಂಡಿರುವ ಕೆಲ ದಂಧೆಕೋರರು ಹಣದಾಸೆಗಾಗಿ ಪುರಸಭೆ ಕಚೇರಿಯಲ್ಲಿ ವಿತರಿಸಬೇಕಾಗಿರುವ ಖಾತೆ ನಕಲು ದಾಖಲೆಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇವು ಅಸಲಿ ದಾಖಲೆಗಳನ್ನು ಹೋಲುವ ಮಾದರಿಯಲ್ಲಿವೆ.
ಬಾಗೇಪಲ್ಲಿ ಪುರಸಭೆಯ 23 ವಾರ್ಡ್ಗಳ ಗಡಿ ರೇಖೆ ವ್ಯಾಪ್ತಿಯೊಳಗಿರುವ ಮನೆ ಮತ್ತು ನಿವೇಶನಗಳ ಇ-ಖಾತೆ ಮತ್ತು ಖಾತೆ ಬದಲಾವಣೆಗಾಗಿ ಕಳೆದ ಐದು ವರ್ಷಗಳಿಂದ 2 ಸಾವಿರ ಕ್ಕೂ ಹೆಚ್ಚು ನಾಗರಿಕರು ಪುರಸಭೆ ಕಚೇರಿಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇದಕ್ಕೆ ಟೌನ್ ಪ್ಲಾನಿಂಗ್, ಭೂ ಪರಿವರ್ತನೆ ಸೇರಿದಂತೆ ಇತರೆ ನೆಪಗಳು ಹೇಳಿಕೊಂಡು ಖಾತೆ ಮಾಡಿಕೊಡುವುದನ್ನು, ನಿರಾಕ್ಷೇಪಣಾ ಪತ್ರ ನೀಡುವುದನ್ನು ನಿಲ್ಲಿಸಲಾಗಿದೆ. ಇದನ್ನೆ ಬಂಡವಾಳನ್ನಾಗಿ ಮಾಡಿಕೊಂಡಿರುವ ಕಾಳಸಂತೆಯ ದಂಧೆಕೋರರು ಪುರಸಭೆ ಮುಖ್ಯಾಧಿಕಾರಿಗಳ ಹಾಗೂ ಕಂದಾಯ ಅಧಿಕಾರಿಗಳ ಸಹಿಯನ್ನು ಹೋಲುವ ನಕಲಿ ಕೈ ಬರಹದ ಖಾತೆ ದಾಖಲೆಗಳನ್ನು ಸೃಷ್ಟಿಸಿ, 5 ರಿಂದ 6 ಸಾವಿರ ರೂಗಳಿಗೆ ಮಾರುತ್ತಿದ್ದಾರೆ.
*ಬಾಗೇಪಲ್ಲಿ ಪಟ್ಟಣ ವ್ಯಾಪ್ತಿಯ ಸಾವಿರಾರು ನಾಗರೀಕರು ಸಲ್ಲಿಸಿರುವ ಅರ್ಜಿಗಳನ್ನು ಅಧಿಕಾರಿಗಳು ಸಕಾಲಕ್ಕೆ ಇತ್ಯರ್ಥಗೊಳಿಸಿ, ಮನೆ ಮತ್ತು ನಿವೇಶನಗಳ ಅಧೀಕೃತ ಖಾತೆ ದಾಖಲೆ ನೀಡಿದರೆ ಅನುಕೂಲವಾಗುತ್ತದೆ. ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಉದ್ದಟತನದ ಕಾರಣ ನಾಗರೀಕರು ದಲ್ಲಾಳಿಗಳನ್ನು ಅಶ್ರಯಿಸಿ ಅಡ್ಡ ದಾರಿಗಳನ್ನು ಹಿಡಿದು ಮೋಸ ಹೋಗುತ್ತಿದ್ದಾರೆ.
ವಿನೋಧ್ ಕುಮಾರ್, ಪತ್ರಬರಹಗಾರ, ಬಾಗೇಪಲ್ಲಿ.