

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಸ್ಮಾರ್ಟಸಿಟಿ ಯೋಜನೆಯ ಡಿಜಿಟಲಿಕರಣಕ್ಕೆ ಬಳಕೆಯಾದ ಒಟ್ಟು 3.26 ಕೋಟಿ ರೂ.ಗೆ ತಕ್ಕಂತೆ ಯೋಗ್ಯವಾದ ಕೆಲಸವಾಗಿಲ್ಲದಿರುವುದು ಬೆಳಕಿಗೆ ಬಂದಿದೆ.
ಮಾಜಿ ಮೇಯರ್ ವೀರಣ್ಣ ಸವಡಿ ನೇತೃತ್ವದ ಸಮಿತಿ ನೀಡಿದ ತನಿಖಾ ವರದಿಯಲ್ಲಿ ಈ ವಿಚಾರ ಬೆಳಕಿಗೆ ಬಂದಿದ್ದು, ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಡೆದ ಕಾಮಗಾರಿಯು ಸಮರ್ಪಕವಾಗಿಲ್ಲದೇ ಇರುವ ವಿಚಾರ ವರದಿಯಲ್ಲಿ ಕಂಡುಬಂದಿದೆ. ಅಷ್ಟೇಯಲ್ಲ, ಪಾಲಿಕೆ ಅಧಿಕಾರಿಗಳು ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳ ನಡುವೆ ಯಾವುದೇ ಸಮನ್ವಯ ಇರುವದಿಲ್ಲಎಂಬ ವಿಚಾರ ಕೂಡ ವರದಿಯಲ್ಲಿ ಬಹಿರಂಗವಾಗಿದೆ.
ಕೇಂದ್ರ ಸರ್ಕಾರದ ನೆರವಿನಿಂದ ನಡೆದ ಈ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯ ವೀರಣ್ಣ ಸವಡಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಮಾಜಿಮಹಾಪೌರ ಈರೇಶ ಅಂಚಟಗೇರಿ, ಶಿವು ಹಿರೇಮಠ ಹಾಗೂ ಕಾಂಗ್ರೆಸ್ ನ ರಾಜು ಕಮತಿ, ಮಮೂರ ಮೋರೆ ಅವರ ನಿಯೋಗ ಶುಕ್ರವಾರ ಧಾರವಾಡ ಪಾಲಿಕೆಯಲ್ಲಿ ಮೇಯರ್ ಜ್ಯೋತಿ ಪಾಟೀಲ ಅವರಿಗೆ ಈ ತನಿಖಾ ವರದಿ ಸಲ್ಲಿಸಿತು.
ಈ ವರದಿಯಲ್ಲಿಕೇಂದ್ರ ಸರಕಾರದ ನೆರವಿನಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಸ್ಮಾರ್ಟಸಿಟಿ ಯೋಜನೆಯಡಿ ಡಿಜಿಟೀಲಕರಣ ಮಹತ್ವಾಕಾಂಕ್ಷಿ ಸ್ಮಾರ್ಟ ಹೆಲ್ತಕೇರನಲ್ಲಿ ನಡೆದ ಅವ್ಯವಹಾರದ ಕುರಿತು ಮಹಾನಗರ ಪಾಲಿಕೆಯ ಸಭಾ ಭವನದಲ್ಲಿ ಎರಡು ಸಮೀತಿ ಸಭೆಗಳು ಕೂಡ ನಡೆದಿದ್ದವು.
ವೀರಣ್ಣ ಸವಡಿ ಅಧ್ಯಕ್ಷತೆಯ ಈ ಸಮಿಯು ಕೇಳಿದ ಯೋಜನೆಯ ಸಮಗ್ರ ಮಾಹಿತಿಯನ್ನು ನೀಡಬೇಕಾಗಿತ್ತು. ಆದರೆ ಅಭಿಯಂತರರಾದ ವಿಜಯಕುಮಾರ, ಆರೋಗ್ಯ ಅಧಿಕಾರಿಗಳಾದ ಆರ.ಸಿ. ದಂಡೆಪ್ಪನವರ, ಸ್ಮಾರ್ಟಸಿಟಿ ಅಧಿಕಾರಿ ಬಸವರಾಜ ಈ ಸಮೀತಿಗೆ ಒದಗಿಸಿದ ಮಾಹಿತಿ ಅಸಮರ್ಪಕವಾಗಿದೆ ಎಂದು ಆರೋಪಿಸಲಾಗಿದೆ.
ಅಷ್ಟೇಯಲ್ಲ ಹಿಂದಿನ ಸಭೆಯಲ್ಲಿ ಟೆಂಡರ ಹಾಗೂ ಇನ್ನಿತರ ಸಮಗ್ರ ಮಾಹಿತಿಯನ್ನು ಸಮಿತಿಗೆ ನೀಡಲು ಸೂಚಿಸಲಾಗಿತ್ತು. ಆದರೆ ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ಮಾಹಿತಿ ನೀಡದೆ ಇರುವದು ಕಂಡುಬಂದಿದೆ ಎಂದು ಸಮಿತಿಯು ಆರೋಪಿಸಿದೆ.