ಮಂಗಳೂರು: ಪರಿಶಿಷ್ಟ ಜಾತಿ ಹಾಗೂ ಪಂಗಡಗಳಲ್ಲಿನ ಉಪ -ಜಾತಿಗಳಿಗೆ ನೀಡಲು ಉದ್ದೇಶಿಸಿರುವ ಒಳಮೀಸಲಾತಿ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು, ಈ ತೀರ್ಪು ಐತಿಹಾಸಿಕವಾಗಿದೆ. ಪರಿಶಿಷ್ಟ ಜಾತಿ -ಪಂಗಡಗಳು, ದಲಿತ ಪರ ಸಂಘಟನೆಗಳು ಒಳ ಮೀಸಲಾತಿಗಾಗಿ ಸುಧೀರ್ಘ ಹೋರಾಟ ನಡೆಸಿದ್ದು, ಸುಪ್ರೀಂಕೋರ್ಟಿನ ಮಹತ್ವದ ಆದೇಶವು ಬಹು ವರ್ಷಗಳ ನ್ಯಾಯಯುತ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ -ದ. ಕ. ಜಿಲ್ಲಾ ಸಮಿತಿಯು ತಿಳಿಸಿದೆ.
ಸುಪ್ರೀಂ ಕೋರ್ಟ್‌ನ ಆದೇಶವನ್ನು ಸ್ವಾಗತಿಸಿರುವ ಸಮಿತಿಯು, ಕರ್ನಾಟಕದಲ್ಲಿ 2011ರ ಜನಗಣತಿಯ ಪ್ರಕಾರ ಪರಿಶಿಷ್ಟ ಜಾತಿ, ಪಂಗಡಗಳ ಒಟ್ಟು ಜನಸಂಖ್ಯೆ 1.04 ಕೋಟಿ ಆಗಿದ್ದು, ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಪ್ರಕಾರ ಪ್ರಸ್ತುತ 1.20 ಕೋಟಿಗೆ ಹೆಚ್ಚಳವಾಗಿದೆ. ಪರಿಶಿಷ್ಟ ಜಾತಿ /ಪಂಗಡಗಳ ಪ್ರಬಲ ಸಮುದಾಯಗಳು ಮೀಸಲಾತಿಯ ಲಾಭ ಪಡೆದು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಸದೃಢಗೊಂಡಿದ್ದು, ದುರ್ಬಲ ಸಮುದಾಯಗಳಿಗೆ ಮೀಸಲಾತಿಯ ಪ್ರಯೋಜನ ಇನ್ನೂ ಸಿಕ್ಕಿಲ್ಲ. ಹಾಗಾಗಿ ಈ ಸಮುದಾಯಗಳು ಸಮಾಜದಲ್ಲಿ ಇನ್ನೂ ಎಲ್ಲಾ ವಲಯಗಳಲ್ಲೂ ತೀರಾ ಹಿಂದುಳಿಯುವಂತಾಗಿದೆ. ಪರಿಶಿಷ್ಟ ಜಾತಿ, ಪಂಗಡಗಳ ಅತೀ ಸಣ್ಣ ಜಾತಿ, ಸಮುದಾಯಗಳಿಗೂ ಮೀಸಲಾತಿಯ ಪ್ರಯೋಜನ ಸಿಗಬೇಕಾದರೆ ಒಳ ಮೀಸಲಾತಿ ಅತ್ಯವಶ್ಯಕ. ಸುಪ್ರೀಂ ಕೋರ್ಟಿನ ಈ ತೀರ್ಪು ಸಂವಿಧಾನದ ಮೂಲ ಆಶಯವಾದ ಸರ್ವರಿಗೂ ಸಮಬಾಳು -ಸಮಪಾಲು ತತ್ವದೊಂದಿಗೆ, ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದೆ. ಸರ್ಕಾರವು ಆದಷ್ಟು ಶೀಘ್ರವಾಗಿ ಈ ತೀರ್ಪುನ್ನು ಅನುಷ್ಠಾನಗೊಳಿಸಲು ಕ್ರಮವಹಿಸಬೇಕು ಎಂದು ಸಮಿತಿಯ ಜಿಲ್ಲಾ ಸಂಚಾಲಕ ರಘು ಕೆ. ಎಕ್ಕಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.