

ಕಾರವಾರ:ಪ್ರತಿ ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ (ಎಸ್‌ಸಿ ಎಸ್‌ಟಿ ) ಸಮಾಜ, ಸಂಘಟನೆಗಳ ಮುಖಂಡರನ್ನು ಕರೆದು, ಕುಂದು, ಕೊರತೆ ಸಭೆಗಳನ್ನು ಆಯೋಜಿಸಲಾಗುವುದು ಎಂದು ಎಸ್‌ಪಿ ಎನ್.ವಿಷ್ಣುವರ್ಧನ ಭರವಸೆ ನೀಡಿದರು.
ಎಸ್‌ಪಿ ಕಚೇರಿಯಲ್ಲಿ ಭಾನುವಾರ ಎಸ್‌ಸಿ, ಎಸ್‌ಟಿ ಜಿಲ್ಲಾ ಮಟ್ಟದ ಕುಂದು ಕೊರತೆ ಸಭೆ ನಡೆಸಿ ಅವರು ಮಾತನಾಡಿದರು. ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ಸ್ವೀಕರಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಈ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ಎಲ್ಲ ಠಾಣೆಗಳಿಗೆ ಆದೇಶ ಮಾಡಲಿದ್ದೇನೆ ಎಂದರು.
ಅಲ್ಲದೆ, ಪೊಲೀಸ್ ಇಲಾಖೆಯ ಹೊರತಾಗಿ ನಕಲಿ ಜಾತಿ ಪ್ರಮಾಣಪತ್ರ, ಸೌಲಭ್ಯ ಕೊರತೆಗಳ ಕುರಿತು ಕೇಳಿ ಬಂದ ದೂರುಗಳ ಬಗ್ಗೆ ಸಂಬಂಧಟ್ಟ ಇಲಾಖೆಗೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು. ಹೆಚ್ಚುವರಿ ಎಸ್‌ಪಿ ಸಿ.ಟಿ.ಜಯಕುಮಾರ್ ವೇದಿಕೆಯಲ್ಲಿದ್ದರು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ ನೂರಾರು ದಲಿತ ಮುಖಂಡರು, ತಮ್ಮ ದೂರು, ಅಭಿಪ್ರಾಯಗಳನ್ನು ಹೇಳಿಕೊಂಡರು.