

ಕಂಪ್ಲಿ: ಒಳ ಮೀಸಲಾತಿ ಅಗತ್ಯವಿದ್ದು, ಐದಾರು ತಿಂಗಳಲ್ಲಿ ಅನುಷ್ಠಾನಕ್ಕೆ ಬರಲಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ತಾಲೂಕಿನ ರಾಮಸಾಗರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಸಂಚಾಲಕ ಆರ್.ಎಂ.ರಾಮಯ್ಯ ಹಮ್ಮಿಕೊಂಡಿದ್ದ 16 ಜೋಡಿ ಸಾಮೂಹಿಕ ವಿವಾಹಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಒಳ ಮೀಸಲಾತಿಗಾಗಿ ಪ್ರತಿಭಟನೆ ಹಮ್ಮಿಕೊಳ್ಳದೆ ಆಯೋಗಕ್ಕೆ ಮನವಿ ಸಲ್ಲಿಸಲು ಮುಂದಾಗಿ. ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು. ಸಾಮೂಹಿಕ ವಿವಾಹಗಳು ಆರ್ಥಿಕವಾಗಿ ಹಿಂದುಳಿದವರಿಗೆ ವರದಾನವಾಗಿದ್ದು ಸರ್ಕಾರದ ಪ್ರೋತ್ಸಾಹವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪರಿಶಿಷ್ಟರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕಿದೆ ಎಂದರು.
ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ತಂದೆತಾಯಿ, ಅತ್ತೆ ಮಾವಂದಿರನ್ನು ಕೈಬಿಡದೆ ಪೋಷಿಸುವಲ್ಲಿ ನವ ವಿವಾಹಿತರು ಜಾಗೃತಿ ತೋರಬೇಕು. ಮಕ್ಕಳಿಗೆ ತಾರತಮ್ಯರಹಿತ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಎ.ಮಾನಯ್ಯ, ಆಯೋಜಕ ಆರ್.ಎಂ.ರಾಮಯ್ಯ, ಪ್ರಮುಖರಾದ ಎಚ್.ಶಿವಶಂಕರಗೌಡ್ರು, ಕೆ.ಶ್ರೀನಿವಾಸರಾವ್, ಕೆ.ಬಿ.ವಾಸುಕುಮಾರ್, ಎಂ.ಆಶಾ ತಿಪ್ಪೇಸ್ವಾಮಿ, ಕೆ.ಷಣ್ಮುಖ, ಡಾ.ಎ.ಸಿ.ದಾನಪ್ಪ, ಎ.ವೀರಾಂಜನೇಯಲು, ಬಿ.ನಾರಾಯಣಪ್ಪ, ಇಟಗಿ ಬಾಲೇಸಾಬ್, ಎಚ್.ಜಗದೀಶಗೌಡ, ಕರೆಂಟ್ ಗೋಪಾಲಪ್ಪ, ರೇಣುಕಾರಾಜ್, ಕೆ.ಲಕ್ಷ್ಮಣ, ಸುಗ್ಗೇನಹಳ್ಳಿ ರಮೇಶ್ ಇತರರಿದ್ದರು.