ಸುರತ್ಕಲ್ ಅಂಬೇಡ್ಕರ್ ಭವನ ಆವರಣ ಗುಜರಿ ವಾಹನ ತೆರವು ಮಾಡಬೇಕು ದಲಿತ ಕುಂದು ಕೊರತೆ ಸಭೆಯಲ್ಲಿ ಮುಖಂಡರ ಒತ್ತಾಯ

mng-aug27-scst2
Published on

ಮಂಗಳೂರು: ಸುರತ್ಕಲ್ ಅಂಬೇಡ್ಕರ್ ಭವನದ ಆವರಣದೊಳಗೆ ಗುಜರಿ ವಾಹನಗಳನ್ನು ಇಡಲಾಗಿದ್ದು, ಇದು ಅಂಬೇಡ್ಕರ್‌ಗೆ ಅವಮಾನ ಮಾಡಿದಂತಾಗಿದೆ. ತಕ್ಷಣ ಅವುಗಳನ್ನು ತೆರವು ಮಾಡಬೇಕು ಎಂದು ದಲಿತ ಮುಖಂಡ ಸದಾಶಿವ ಉರ್ವಸ್ಟೋರ್ ಒತ್ತಾಯಿಸಿದರು.


ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭಾನುವಾರ ನಡೆದ ದಲಿತ ಕುಂದು ಕೊರತೆ ಸಭೆಯಲ್ಲಿ ಅವರು ಅಹವಾಲು ಮಂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ ಅವರು, ಅವರಣದಲ್ಲಿರುವ ಹಳೇ ವಾಹನಗಳನ್ನು ತಕ್ಷಣ ತೆರವುಗೊಳಿಸಲಾಗುವುದು. ಕೆಎಸ್‌ಆರ್‌ಪಿ ಸಿಬಂದಿಯವರಿಗೆ ಅದರಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಗಳಿಗೆ ಅಗತ್ಯವಿದ್ದಾಗ ಸ್ವಚ್ಛಗೊಳಿಸಿ ನೀಡಲಾಗುವುದು ಎಂದರು.


ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಮಾರಾಟ, ಸೇವನೆ ಪ್ರಕರಣಗಳಿಗೆ ಸಂಬಂಧಿಸಿಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ ಆದರೂ ಪ್ರಕರಣಗಳು ಮರುಕಳಿಸುತ್ತಿವೆ ಎಂದು ಗಿರೀಶ್ ಕುಮಾರ್ ಹೇಳಿದರು.


ಮಂಗಳೂರನ್ನು ಮಾದಕ ಮುಕ್ತ ನಗರವನ್ನಾಗಿಸಲು ಪ್ರತಿ ಠಾಣೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ 10 ಮಂದಿ ಸಿಬಂದಿ ಒಳಗೊಂಡಂತೆ ತಂಡ ರಚಿಸಲಾಗಿದ್ದು, 2ತಿಂಗಳಿಂದ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಮಾರಾಟ, ಸೇವನೆಗೆ ಸಂಬಂಧಿಸಿಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಸಾರ್ವಜನಿಕ ಸಹಕಾರವಿದ್ದರೆ, ಜಾಲದ ಮೂಲವನ್ನು ನಿಗ್ರಹ ಮಾಡಲು ಸಾಧ್ಯವಿದೆ ಎಂದು ಡಿಸಿಪಿ ದಿನೇಶ್ ಕುಮಾರ್ ಹೇಳಿದರು.


ದಲಿತ ಮುಖಂಡ ಎಸ್.ಪಿ.ಆನಂದ ಅವರು, ಪೊಲೀಸ್ ಠಾಣೆಗಳಲ್ಲಿ ಸಮರ್ಪಕವಾಗಿ ದಲಿತ ಕುಂದು ಕೊರತೆ ಸಭೆ ನಡೆಯುತ್ತಿಲ್ಲ ಎಂದು ಆರೋಪಿಸಿದರು. ಡಿಸಿಪಿಯವರು ಉತ್ತರಿಸಿ, ಕಮಿಷನರೇಟ್ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ತಿಂಗಳ ಮೂರನೇ ಭಾನುವಾರ ಕಡ್ಡಾಯವಾಗಿ ದಲಿತ ಕುಂದು ಕೊರತೆ ಸಭೆ ನಡೆಸಬೇಕು ಎಂದು ಸೂಚಿಸಿದರು. ಅಗತ್ಯವಿದ್ದರೆ ದಲಿತ ಕಾಲನಿಗಳಲ್ಲಿಯೂ ಸಭೆ ನಡೆಸಬೇಕು. ಬೀಟ್ ಸಭೆಯೂ ತಪ್ಪದಂತೆ ನಡೆಯಬೇಕು. ನ್ಯಾಯಯುವತವಾದ ಎಲ್ಲ ಬೇಡಿಕೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದರು.


ಪೇಯಿಂಗ್ ಗೆಸ್ಟ್ ನಡೆಸುತ್ತಿರುವ ಮಹಿಳೆಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿ ಕೊಂಡು ಕ್ರಿಶ್ಚಿಯನ್ ಯುವಕನೊಬ್ಬ ಮೋಸ ಮಾಡಿರುವ ಕುರಿತು ಪಾಂಡೇಶ್ವರ ಮಹಿಳಾ ಠಾಣೆಗೆ ದೂರು ನೀಡಿದರೂ, ಸೂಕ್ತ ಕ್ರಮ ಕೈಗೊಂಡಿಲ್ಲ. ಯುವಕನ ಅಮ್ಮ ಜಾತಿ ನಿಂದನೆ ಮಾಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಕಾಸರಗೋಡಿನ ಅಪರಿಚಿತ ಯುವಕನೊಬ್ಬ ಮಹಿಳೆಯೊಬ್ಬರಿಗೆ ರಾತ್ರಿ ವೇಳೆ ಮನೆ ಮುಂದೆ ಬಂದು ಕಿರುಕುಳ ನೀಡುತ್ತಿದ್ದಾನೆ ಎಂದು ಎಸ್.ಪಿ.ಆನಂದ ಹೇಳಿದರು. ಈ ಬಗ್ಗೆ ಉತ್ತರಿಸಿದ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಅನ್ಶು ಕುಮಾರ್ ಅವರು, ಖುದ್ದು ಈ ಬಗ್ಗೆ ಮುತುವರ್ಜಿ ವಹಿಸಿ, ತನಿಖೆ ನಡೆಸುತ್ತೇನೆ ಎಂದರು.


ಪಿಲಿಕುಳದಲ್ಲಿ ನಡೆದ ಅವ್ಯಹಾರಕ್ಕೆ ಸಂಬಂಧಿಸಿಂತೆ, ವಿನಾ ಕಾರಣ ತನ್ನನ್ನು ಕೆಲಸದಿಂದ ತೆಗೆದು ಹಾಕಿದ್ದು, ಜೀವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ದೂರು ದಾಖಲಿಸಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಶೋಕ್ ಎನ್ನುವವರು ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಡಿಸಿಪಿ ತಿಳಿಸಿದರು.
ಮೀನುಗಾರಿಕಾ ದಕ್ಕೆಯಲ್ಲಿ ಬೆಳಗ್ಗೆ 3.30ರಿಂದಲೇ ವೈನ್ ಶಾಪ್‌ಗಳು ಅನಧಿಕೃತವಾಗಿ ವ್ಯವಹಾರ ನಡೆಸುತ್ತದೆ. ಬಲ್ಮಠ ರಸ್ತೆಯ ಒಳ ರಸ್ತೆಯಲ್ಲಿ ವಿದ್ಯಾರ್ಥಿಗಳು ವೀಲಿಂಗ್ ಮಾಡುತ್ತಾರೆ. ಸಿಟಿ-ಸರ್ವೀಸ್ ಬಸ್ ತಂಗುದಾಣದಲ್ಲಿ ಬೆಳಗ್ಗಿನ ಹೊತ್ತು ಪೊಲೀಸರನ್ನು ನಿಯೋಜಿಸಬೇಕು. ಪಾಂಡೇಶ್ವರ ನ್ಯೂರೋಡ್‌ನಲ್ಲಿ ಮಿಲಿಟರಿ ಕ್ಯಾಂಟೀನ್‌ನಿಂದ ಸ್ಥಳೀಯರಿಗೆ ಸಮಸ್ಯೆಯಾಗಿದೆ. ಕುಡುಪಾಡಿ ಮೈದಾನದಲ್ಲಿ ಕೋಳಿ ಅಂಕ ನಡೆದರೂ, ಪೊಲೀಸರು ಕ್ರಮ ಕೈಗೊಂಡಿಲ್ಲ ಮೊದಲಾದ ವಿಚಾರಗಳಿಗೆ ಸಂಬಂಧಿಸಿಂತೆ ಅಹವಾಲು ಸಲ್ಲಿಸಿದರು.


ದಲಿತ ಮುಖಂಡರಾದ ವಿಶ್ವನಾಥ ಚೆಂಡ್ತಿಮಾರ್, ಮುಕೇಶ್ ಕುಮಾರ್, ಅನಿಲ್ ಕುಮಾರ್, ಅಮಲ ಜ್ಯೋತಿ, ರಾಮಚಂದ್ರ, ಸಂಜೀವ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net