

ಮಂಗಳೂರು: ದಲಿತರಿಗೆ ನೆರವಾಗಿ ಅವರ ರಕ್ಷಣೆಗಿರುವ ದಲಿತ ದೌರ್ಜನ್ಯ ಕಾಯ್ದೆ ದಲಿತರಿಂದಲೇ ದುರುಪಯೋಗವಾಗುತ್ತಿದೆ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತಿದೆ. ಪೊಲೀಸರು ಇದನ್ನು ತಡೆಗಟ್ಟಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭಾನುವಾರ ನಡೆದ ದಲಿತ ಕುಂದು ಕೊರತೆ ಮಾಸಿಕ ಸಭೆಯಲ್ಲಿ ಈ ಆಗ್ರಹ ವ್ಯಕ್ತವಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಅಂಶುಕುಮಾರ್ ಅವರು, ದಲಿತರಿಗೆ ನೆರವಾಗಬೇಕೆಂಬುದು ಕಾಯ್ದೆಯ ಉದ್ದೇಶ. ಅನುಷ್ಠಾನಗೊಳಿಸುವುದು ನಮ್ಮ ಕರ್ತವ್ಯ. ಅದರ ದುರುಪಯೋಗವಾಗದಂತೆ ತಡೆಯಬೇಕಾದರೆ ಜಾಗೃತಿ ಮೂಡಿಸುವುದು ಅಗತ್ಯ ಎಂದರು.
ದಲಿತ ಮುಖಂಡ ಶೀನ ಅವರು ಮಾತನಾಡಿ,ದಲಿತ ದೌಜನ್ಯ ಪ್ರಕರಣದಲ್ಲಿ ಸಂತ್ರಸ್ತರಿಗೆ ನ್ಯಾಯೋಚಿತವಾಗಿ ಪರಿಹಾರ ಸಿಗಬೇಕು. ಆದರೆ ಕೆಲವರು ಸುಳ್ಳು ಮಾಹಿತಿಗಳನ್ನು ನೀಡಿ ಪರಿಹಾರ ಪಡೆದುಕೊಳ್ಳುತ್ತಿದ್ದಾರೆ ಎಂದರು. ಇದಕ್ಕೆ ದನಿಗೂಡಿಸಿದ ಗಿರೀಶ್ ಕುಮಾರ್ ಅವರು, ಇತ್ತೀಚೆಗೆ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಎರಡು ಕಡೆಗಳಲ್ಲಿ ಬಾಡಿಗೆಗೆ ಮನೆ ಪಡೆದು ಅನಂತರ ದಲಿತರೆಂದು ಹೇಳಿ ಬೆದರಿಕೆ ಹಾಕಿರುವ ಘಟನೆಗಳು ನಡೆದಿವೆ. ಇನ್ನೊಂದು ಪ್ರಕರಣದಲ್ಲಿ ದಲಿತ ವ್ಯಕ್ತಿಯೋರ್ವ ಸರ್ಕಾರದಿಂದ ಎಸ್‌ಟಿಯವರಿಗೆ ಮೀಸಲಿಟ್ಟ ಜಾಗವನ್ನು ತೋರಿಸಿ ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಹೇಳಿ ಲಕ್ಷಾಂತರ ರೂ. ಪಡೆದು ವಂಚಿಸಿ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ. ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಪೊಲೀಸರನ್ನು ಕೂಡ ಬೆದರಿಸುವ ಕೆಲಸಗಳು ನಡೆಯುತ್ತಿದೆ. ಇಂತಹ ಘಟನೆಗಳಿಂದಾಗಿ ನಿಜವಾಗಿ ದೌರ್ಜನ್ಯ, ಅನ್ಯಾಯಕ್ಕೊಳಗಾದ ದಲಿತರಿಗೆ ಸಮಸ್ಯೆಯಾಗಬಾರದು ಎಂದರು.