

ಬೈಲುಕುಪ್ಪೆ: ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಭಾನುವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಸಭೆಯಲ್ಲಿ ಗ್ರಾಮೀಣ ಮುಖಂಡರ ಆಹವಾಲು ಆಲಿಸಿದರು.
ದಲಿತರು ಹಾಗೂ ಬಡವರು ದೂರು ಕೊಡಲು ಬಂದಾಗ ಠಾಣೆ ಸಿಬ್ಬಂದಿ ಏಕವಚನದಲ್ಲಿ ಮಾತನಾಡುತ್ತಾರೆ. ಹೀಗಾಗಿ ಪೊಲೀಸ್ ಠಾಣೆಗೆ ಬರಲು ಜನ ಹಿಂಜರಿಯುತ್ತಾರೆ ಎಂದು ಬೆಣಗಾಲ್ ಗ್ರಾ ಪಂ ಸದಸ್ಯ ಧನರಾಜ್ ಆರೋಪಿಸಿದರು.
ಪಿಎಸ್‌ಐ ರವಿಕುಮಾರ್ ಮಾತನಾಡಿ, ನಾನು ಹೊಸದಾಗಿ ಬಂದಿದ್ದೇನೆ. ಈ ಬಗ್ಗೆ ನಮ್ಮ ಸಿಬ್ಬಂದಿ ಜತೆ ಚರ್ಚಿಸಿ ಸಮಸ್ಯೆ ಸರಿಪಡಿಸಲಾಗುವುದು ಎಂದು ತಿಳಿಸಿದರು. ಅಲ್ಲದೆ ಸಾರ್ವಜನಿಕರು ಪೊಲೀಸ್ ಠಾಣೆಗೆ ತಮ್ಮ ಆಹವಾಲುಗಳನ್ನು ನೀಡಲು ಬಂದಾಗ ಸಿಬ್ಬಂದಿ ತಾಳ್ಮೆಯಿಂದ ವರ್ತಿಸಿ, ನೊಂದವರಿಗೆ ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.
ಚನ್ನಕಲ್ ಕಾವಲ್, ಬೆಣಗಾಲು ಭಾಗದಲ್ಲಿ ಹಿಂದುಳಿದ ಪಂಗಡದವರು, ಕೂಲಿ ಕಾರ್ಮಿಕರು ಒಂದು ಅಥವಾ ಎರಡು ಎಕರೆ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಭಾಗದಲ್ಲಿ ಯಾರಿಗೂ ಜಮೀನು ಸಂಬಂಧಪಟ್ಟ ದಾಖಲೆ ಇಲ್ಲ. ಇದರಿಂದ ಸವರ್ಣೀಯರು ತುಂಬಾ ತೊಂದರೆ ಕೊಡುತ್ತಿದ್ದಾರೆ ಎಂದು ಮುಖಂಡರು ದೂರಿದರು.
ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಪತ್ರ ಬರೆಯಲಾಗುವುದು ಪಿಎಸ್‌ಐ ತಿಳಿಸಿದರು. ದೊಡ್ಡ ಹರವೆ, ನವಿಲೂರು, ರಾಣಿಗೇಟ್ ಭಾಗದಲ್ಲಿ ಅಕ್ರಮ ಮದ್ಯ, ಗಾಂಜಾ ಮಾರಾಟ ಮಾಡುವುದು ಗಮನಕ್ಕೆ ಬಂದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು, ಗ್ರಾಮಸ್ಥರು ಸಹಕರಿಸಬೇಕು ಎಂದರು.
ದಲಿತ ಮುಖಂಡರಾದ ನವಿಲೂರು ಚೆನ್ನಪ್ಪ, ಮಹಾದೇವ್, ಬೆಣಗಾಲು ಗ್ರಾಪಂ ಅಧ್ಯಕ್ಷ ಪ್ರಕಾಶ್, ಸದಸ್ಯ ಧನರಾಜ್, ದೊಡ್ಡ ಹರವೆ ಬಸವರಾಜ್. ಸಣ್ಣಯ್ಯ, ಮಲ್ಲಿಕಾರ್ಜುನ, ಸೋಮಶೇಖರ್, ಗಣೇಶ್, ಬೆಮ್ಮತಿ ಚಂದ್ರು, ಸಿಬ್ಬಂದಿ ಮುದ್ದುರಾಜ್, ಸುರೇಶ್ ಇತರರು ಇದ್ದರು.