ಸುಳ್ಯ: ತಾಲೂಕು ಮಟ್ಟದ ಎಸ್‌ಸಿ, ಎಸ್‌ಟಿ ಕುಂದುಕೊರತೆ ಸಭೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ನಡೆದಿದ್ದು, ಅಂಬೇಡ್ಕರ್ ಭವನದ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕೆಂಬ ಆಗ್ರಹ ದಲಿತ ಮುಖಂಡರಿಂದ ಕೇಳಿ ಬಂತು.
ತಹಸೀಲ್ದಾರ್ ಮಂಜುಳಾ ಎಂ.ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಲಿತ ಮುಖಂಡರು ಕುಂಟುತ್ತಾ ಸಾಗುತ್ತಿರುವ ಅಂಬೇಡ್ಕರ್ ಭವನದ ಕಾಮಗಾರಿ ಬಗ್ಗೆ ಪ್ರಸ್ತಾಪಿಸಿದರು.
ದಲಿತ ಮುಖಂಡ ಆನಂದ ಸಂಕೇಶ ಮಾತನಾಡಿ, ದಶಕದ ಹಿಂದೆ ಆರಂಭಗೊಂಡ ಕಾಮಗಾರಿ ಇನೂ ಪೂರ್ಣಗೊಳ್ಳದಿರುವುದು ಖೇದಕರ. ಆದಷ್ಟು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಿ ಸಮುದಾಯದ ಜನರಿಗೆ ಪ್ರಯೋಜನ ಆಗುವಂತೆ ಮಾಡಬೇಕು ಎಂದರು.
ಈ ವೇಳೆ ಅಧಿಕಾರಿಗಳ ಜತೆ ಮಾತನಾಡಿದ ತಹಸೀಲ್ದಾರ್ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ತುರ್ತಾಗಿ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಡಿಸಿ ಮನ್ನಾ ಜಾಗವನ್ನು ಬೇರೆ ಸಮುದಾಯದವರು ದುರುಪಯೋಗಪಡಿಸಿಕೊಂಡ ಬಗ್ಗೆಯೂ ಪ್ರಸ್ತಾಪಿಸಲಾಯಿತು. ಸರ್ಕಾರಿ ಬಸ್ ನಿಲ್ದಾಣದ ಕಟ್ಟಡದಲ್ಲಿ ದಲಿತ ಸಮುದಾಯದವರಿಗೂ ಅಂಗಡಿ ಮೀಸಲಿಟ್ಟು ಅಲ್ಲಿ ದಲಿತರೇ ವ್ಯಾಪಾರ ಮಾಡುತ್ತಿದ್ದಾರೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಮುಖಂಡರು ಆಗ್ರಹಿಸಿದರು.
ಸಮಾಜ ಕಲ್ಯಾಣ ಅಧಿಕಾರಿ ಉಮಾ ದೇವಿ ಸ್ವಾಗತಿಸಿದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ವಂದಿಸಿದರು.