ನಿಗದಿಪಡಿಸಿದ ಆರ್ಥಿಕ ಭೌತಿಕ ಗುರಿ ಸಾಧನೆಯಡೆಗೆ ಕಾರ್ಯಪ್ರವೃತ್ತರಾಗಿ - ವೈಶಾಲಿ ಎಂ.ಎಲ್.

DSC_0294
Published on

ಗದಗ: ಪ.ಜಾ ಪ.ಪಂ.ಉಪಹಂಚಿಕೆ ಯೋಜನೆಗೆ ಸಂಬಂಧಿಸಿದಂತೆ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯಗಳನ್ನು ನಿಗದಿತ ಕಾಲಾವಧಿಯಲ್ಲಿಯೇ ದೊರಕಿಸಿ ಕೊಡಲು ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.  ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಪ್ರಗತಿ  ಪರಿಶೀಲನಾ  ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಂದಿನ 2-3 ತಿಂಗಳ ನಂತರ ಯಾವುದೇ ಸಂದರ್ಭದಲ್ಲಾದರೂ ಲೋಕಸಭೆ ಚುನಾವಣೆ ಎದುರಾಗಬಹುದು ಇಲ್ಲವೇ ಅದಕ್ಕೂ ಮೊದಲೇ  ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳು ಬಂದರೂ ಸಹ ಚುನಾವಣಾ ಕಾರ್ಯದಲ್ಲಿ ನಿಗದಿಪಡಿಸಿದ ಗುರಿ ಸಾಧನೆಗೆ ಹಿನ್ನೆಡೆಯುಂಟಾಗಬಹುದು ಹಾಗಾಗಿ ಅಧಿಕಾರಿಗಳು ತಮ್ಮ ಇಲಾಖೆಗಳಿಗೆ ನೀಡಿದ ಆರ್ಥಿಕ ಹಾಗೂ ಭೌತಿಕ ಗುರಿ ಸಾಧನೆಯಡೆಗೆ ಗಮನ ಹರಿಸುವಂತೆ  ತಿಳಿಸಿದರು.

ಪ.ಜಾ/ಪ.ಪಂ. ಉಪಹಂಚಿಕೆ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳ ಆಯ್ಕೆ ಮಾಡುವಾಗ ಪಾರದರ್ಶಕತೆಯಿರಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ವಿಳಂಬವಾಗದೇ ಶೀಘ್ರಗತಿಯಲ್ಲಿ ತಲುಪುವಂತಾಗಬೇಕು. ಯೋಜನೆಯ ಅನುಷ್ಟಾನದಲ್ಲಿ ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧನೆ ಅತಿ ಮುಖ್ಯವಾಗಿದ್ದು,  ಕ್ರಿಯಾ ಯೋಜನೆ ತಯಾರಾದ ನಂತರ ಟೆಂಡರ್ ಕರೆದು ನಿಗದಿತ ಕಾಲಮಿತಿಯಲ್ಲಿಯೇ ಕಾಮಗಾರಿ ಪೂರ್ಣಗೊಳ್ಳುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಸದರಿ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಹಾಗೂ ಇಲಾಖಾವಾರು ಸಾಧಿಸಿದ ಪ್ರಗತಿ ವಿವರವನ್ನು ಇಲಾಖೆ ಅಂತರ್ಜಾಲದಲ್ಲಿ ತಪ್ಪದೇ  ಅಪ್‍ಡೇಟ್ ಮಾಡುವುದು ಕೂಡ ತುಂಬಾ ಮುಖ್ಯವಾಗಿದೆ ಎಂದರು.    

ಎಸ್.ಸಿ/ ಎಸ್.ಟಿ. ಪ್ರದೇಶದಲ್ಲಿ ಕೈಗೊಂಡ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಬಿಡುಗಡೆಯಾದ ಅನುದಾನ ಲೋಪವಾಗದಂತೆ ನೋಡಿಕೊಳ್ಳಬೇಕು. ಇಲಾಖೆಯ ಅಧಿಕಾರಿಗಳು ಕಚೇರಿ ಕೆಲಸದ ಸಮಯ  ಪರಿಪಾಲನೆ ಮಾಡುವುದು ಅವಶ್ಯಕವಾಗಿದೆ. ತಾಲೂಕು ಮಟ್ಟದಲ್ಲಿಯೂ ಎಸ್.ಸಿ.ಪಿ./ ಟಿ.ಎಸ್.ಪಿ. ಸಭೆಯನ್ನು ನಿಯಮಿತವಾಗಿ ಕೈಗೊಳ್ಳಬೇಕು ಎಂದು ಹೇಳಿದರು.  

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಅವರು ಮಾತನಾಡಿ ಇಲಾಖಾವಾರು ನೀಡಲಾದ ಗುರಿ ಹಾಗೂ ಸಾಧಿಸಿದ ಪ್ರಗತಿಯ ಅಂಕಿ ಅಂಶಗಳನ್ನು ಸಭೆಯ ಗಮನಕ್ಕೆ ತಂದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ್,  ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ , ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಗಂಗಪ್ಪ,  ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟೆಮನಿ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಹುಲಗಣ್ಣವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net