ಎಸ್‌ಸಿ ಎಸ್‌ಟಿ ನೌಕರರ ಸಂಘದಿಂದ 80 ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ

sc-st-employees-union-program
Published on

ಕಾರವಾರ: ವಿದ್ಯಾರ್ಥಿಗಳು ಜೀವನದಲ್ಲಿ ಮಹತ್ವಾಕಾಂಕ್ಷೆಯನ್ನ ಹೊಂದಿರಬೇಕು. ಉನ್ನತ ಸ್ಥಾನಕ್ಕೆ ಹೋಗುವ ಉದ್ದೇಶ ಇಟ್ಟುಕೊಂಡೇ ವಿದ್ಯಾಭ್ಯಾಸ ಮಾಡಬೇಕು, ಆಗ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು‌ ಬೆಂಗಳೂರಿನ ಅಕ್ಕ ಐಎಎಸ್ ಅಕಾಡೆಮಿಯ ಸಂಸ್ಥಾಪಕ  ಡಾ. ಶಿವಕುಮಾರ್ ಹೇಳಿದರು.

ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟ ಉತ್ತರ ಕನ್ನಡ ಜಿಲ್ಲಾ‌ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ನಗರದ ಅಜ್ವಿ ಹೋಟೆಲ್ ನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಕಷ್ಟಪಟ್ಟು ಉನ್ನತ ವ್ಯಾಸಂಗ ಮಾಡಿದ್ದರು.  ಜ್ಞಾನಕ್ಕೆ ಹೆಚ್ಚು ಒತ್ತನ್ನ ನೀಡಿದ್ದರು. ಅವರ ಜ್ಞಾನ ತಳ ಸಮುದಾಯದ ಏಳಿಗೆಗೆ ಬಳಸಿಕೊಂಡದನ್ನ ಎಲ್ಲರೂ  ಇಂದಿಗೂ ನೆನೆಯಬೇಕು ಎಂದರು.

ಅಂಬೇಡ್ಕರ್ ಅವರು ಮನಸ್ಸು ಮಾಡಿದ್ದರೆ ದೇಶ ಹಾಗೂ ವಿದೇಶದಲ್ಲಿ ದೊಡ್ಡ ಹುದ್ದೆ ಪಡೆಯಬಹುದಿತ್ತು. ಆದರೆ ಎಲ್ಲವನ್ನ ತ್ಯಜಿಸಿದ್ದ ಅವರು ತುಳಿತಕ್ಕೊಳಗಾಗಿದ್ದ ಸಮುದಾಯದ ಏಳಿಗೆಗೆ ದುಡಿದರು. ಅಂಬೇಡ್ಕರ್ ಅವರು ಮಾಡಿದ ಎಲ್ಲಾ ಕೆಲಸ ಪ್ರೇರಣೆಯಾಗಿದೆ. ಅವರ ಪ್ರೇರಣೆಯಂತೆ ನಾವೆಲ್ಲ ನಡೆಯುತ್ತಿದ್ದೇವೆ ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ಹಿಂದೆಯೇ ಹೇಳಿದ್ದರು. ದಲಿತರು ಮಹತ್ವಾಕಾಂಕ್ಷೆಯನ್ನ ಹೊಂದಿರುವುದಿಲ್ಲ ಎಂದು. ಸಣ್ಣ ಹುದ್ದೆಗೆ ಹೋದರೆ ಸಾಕು ಎನ್ನುತ್ತಾರೆ,ಆದರೆ ಸಮಾಜದಲ್ಲಿ ಏನಾದರು ಸಾಧನೆ ಮಾಡಬೇಕಾದರೆ ದಲಿತರು ದೊಡ್ಡ ಹುದ್ದೆಗೆ ಹೋಗುವ ಮಹತ್ವಾಕಾಂಕ್ಷೆಯ ಇಟ್ಟುಕೊಂಡು ಓದಿದರೆ ಒಳ್ಳೆಯ ಸ್ಥಾನಕ್ಕೆ ಹೋಗುತ್ತೀರಿ. ಆಗ ಅಂಬೇಡ್ಕರ್ ಅವರಿಗೆ ಕೊಡುಗ ಗೌರವ ಎಂದರು.

75 ವರ್ಷವಾಗಿದೆ ಸ್ವಾತಂತ್ರ್ಯ ಬಂದು. ಆದರೆ ದಲಿತರು ಎಷ್ಟು ದೊಡ್ಡ ಹುದ್ದೆಗೆ ಹೋಗಿದ್ದಾರೆ. ಕೈಗಾರಿಕೆ, ಕೃಷಿ, ಯಾವುದೇ ಕ್ಷೇತ್ರದಲ್ಲಿ ದೊಡ್ಡ ಹಂತಕ್ಕೆ ಈ ವರೆಗೂ ಯಾರು ಹೋಗಿಲ್ಲ. ಆದರೆ ಜ್ಞಾನ ಎನ್ನುವ ಕ್ಷೇತ್ರದಲ್ಲಿ ದೊಡ್ಡ ಹಂತಕ್ಕೆ ‌ಹೊಗಲು ಅವಕಾಶ ಇದೆ. ಈ ನಿಟ್ಟಿನಲ್ಲಿ ಓದು ನಿರಂತರವಾಗಿ ಇರಲಿ. ಜ್ಞಾನ ಎನ್ನುವ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿ ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ಭಾರತಕ್ಕೆ ಓದಿಕೊಂಡು ಬಂದಾಗ ಸವರ್ಣೀಯಕರು ಹೂವನ್ನ ಹಾಕಿ ಸ್ವಾಗತ ಮಾಡಬೇಕಾಗಿತ್ತು. ಆದರೆ ಅವರನ್ನು ಕೀಳಾಗಿ ಕಂಡರು. ಅಂಬೇಡ್ಕರ್ ಅವರಿಗೆ ಬಾಡಿಗೆ ಮನೆ ಕೊಡದೇ ಪ್ರತಿ ಹಂತದಲ್ಲೂ ಅವಮಾನ ಮಾಡಿದರು. ಆದರೆ ಅವರು ಎಲ್ಲವನ್ನೂ ಮೆಟ್ಟಿ ನಿಂತು ತನ್ನ ಸಮುದಾಯದ ಏಳಿಗೆಗೆ ದುಡಿದರು. ಅಂಬೇಡ್ಕರ್ ಅವರ ಜೀವನ ಎಲ್ಲರಿಗೂ ಒಂದು ಪಾಠ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಪೌರಾಯುಕ್ತ ರವಿಕುಮಾರ್ ಮಾತನಾಡಿ ಪ್ರತಿಭಾ ಪುರಸ್ಕಾರ ಎನ್ನುವುದು ಕೇವಲ ಕಾರ್ಯಕ್ರಮ ಮಾತ್ರವಲ್ಲ. ಇಲ್ಲಿ  ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡಿ ಕಳಿಸುವುದರಿಂದ ಇನ್ನು ಹೆಚ್ಚು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸಮುದಾಯದ ಮಕ್ಕಳು ಉನ್ನತ ಸ್ಥಾನಕ್ಕೆ ಹೋದರೆ ಆಗ ಈ ಪುರಸ್ಕಾರ ಕಾರ್ಯಕ್ರಮ ಯಶಸ್ವಿಯಾದಂತೆ ಎಂದರು.

ಈ ಸಂದರ್ಭದಲ್ಲಿ  ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ ಬಂದ ಗಣ್ಯರನ್ನ ಸ್ವಾಗತಿಸಿದರು.  ಉಡುಪಿಯ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜಿನಿಯರ್ ಮೋಹನ್ ರಾಜ್, ಗೋಕಾಕ್ ಉಪತಹಶೀಲ್ದಾರ್ ಪರಸಪ್ಪ ನಾಯಕ, ಕದ್ರಾ ಕೆಪಿಸಿಯ ಅಧೀಕ್ಷಕ ಇಂಜಿನಿಯರ್ ಶ್ರೀಧರ್ ಕೋರಿ, ಕಾರವಾರ ಮೆಡಿಕಲ್ ಕಾಲೇಜಿನ ಡಾ. ಹೇಮಗಿರಿ, ಡಾ. ಮಧುಕರ್, ಮೈಸೂರಿನ ಸಾಂಖಿಕ ಮತ್ತು ಆರ್ಥಿಕ ಇಲಾಖೆಯ ಸಹಾಯ ನಿರ್ದೇಶಕರು ದಾಕ್ಷಾಯಿಣಿ, ಧಾರವಾರ ಜಿಲ್ಲಾ‌ ನೌಕರರ ಒಕ್ಕೂಟದ ಅಧ್ಯಕ್ಷ ಫಕೀರಪ್ಪ, ಭೀಮಾಶಂಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಘಟನೆಯ ಜಿಲ್ಲಾಧ್ಯಕ್ಷ ಜಿ.ಡಿ ಮನೋಜೆ ಪ್ರಾಸ್ತವಿಕ ಮಾತನಾಡಿದರು. ಸಂಘಟನೆಯ ಗಣೇಶ್ ಬಿಷ್ಠಣ್ಣನವರ್ ನಿರೂಪಿಸಿದರು. 

ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಇಂಜಿನಿಯರಿಂಗ್ ಹಾಗೂ ಮೆಡಿಕಲ್ ನಲ್ಲಿ ಸಾಧನೆ ಮಾಡಿದ‌ ಸುಮಾರು 80 ಕ್ಕೂ ಅಧಿಕ ಮಕ್ಕಳಿಗೆ ಪುರಸ್ಕಾರ ಮಾಡಲಾಯಿತು.

ಫಕೀರಪ್ಪ ಹಾಗೂ ಲೀಲಾಬಾಯಿ ಠಾಣೇಕರ್ ಗೆ ಪ್ರಶಸ್ತಿ

ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟ‌ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಡಾ. ಅಂಬೇಡ್ಕರ್ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ರಮಾಬಾಯಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಈ ಬಾರಿ ದಲಿತ ಸಂಘಟನೆಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ದುಡಿಯುತ್ತಿರುವ ದಲಿತರ ಪರ, ಸಮಸ್ಯೆಗೆ ಧ್ವನಿಯಾಗಿ ಹೋರಾಡುತ್ತಿರುವ ಮುಂಡಗೋಡಿನ ಫಕೀರಪ್ಪ ಅವರಿಗೆ ಈ ಬಾರಿ ಡಾ.‌ಬಿ ಆರ್ ಅಂಬೇಡ್ಕರ್ ಜೀವಮಾನ‌ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇನ್ನು ಗಡಿ ಪ್ರದೇಶವಾದ ಕಾರವಾರದ ನಗರಸಭೆಗೆ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ದಲಿತರ ಪರ ನಿರಂತರವಾಗಿ ಕೆಲಸ ಮಾಡುತ್ತಿರುವ ಲೀಲಾಬಾಯಿ ಠಾಣೆಕರ್ ಅವರಿಗೆ ರಮಾಬಾಯಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net