ದೌರ್ಜನ್ಯ ಪ್ರಕರಣಗಳ ಇತ್ಯರ್ಥ ಶೀಘ್ರ: ಎಡಿಸಿ ವಿಜಯಾ ಈ. ರವಿಕುಮಾರ್ ತಾಕೀತು

4fa9d60a-e32a-4117-bd0a-8f2e2211b935
Published on

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ದಾಖಲಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಿ ನೊಂದವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅಪರ ಜಿಲ್ಲಾಧಿಕಾರಿ ವಿಜಯಾ ಈ. ರವಿಕುಮಾರ್ ಅಧಿಕಾರಿಗಳಿಗೆ ತಾಕೀತು ಮಾಡಿದರು.


ದೇವನಹಳ್ಳಿ ತಾಲೂಕು ಬೀರಸಂದ್ರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ 2ನೇ ತ್ರೈಮಾಸಿಕ ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳ ಜತೆಗೆ ಇನ್ನಿತರ ಪ್ರಕರಣಗಳ ಬಗ್ಗೆಯೂ ಅಧಿಕಾರಿಗಳು ಗಮನ ನೀಡಬೇಕು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಶೀಘ್ರವಾಗಿ ಪರಿಶೀಲಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳಬೇಕು, ಈ ವಿಷಯದಲ್ಲಿ ವಿನಾಕಾರಣ ವಿಳಂಬ ಅನುಸರಿಸಿದರೆ ಅಂಥ ಅಧಿಕಾರಿಗಳು ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಸಭೆ ನಡೆಯಲೇಬೇಕು:
ಜಿಲ್ಲೆಯ ಹೊಸಕೋಟೆ, ನೆಲಮಂಗಲ, ದೇವನಹಳ್ಳಿ ಹಾಗೂ ಹೊಸಕೋಟೆ ತಾಲೂಕುಗಳಲ್ಲಿ ನಿಗದಿತ ಸಮಯಕ್ಕೆ ಜಾಗೃತಿ ಸಭೆ ಹಾಗೂ ಉಸ್ತುವಾರಿ ಸಮಿತಿ ಸಭೆಗಳನ್ನು ನಡೆಸಬೇಕು. ಈ ವಿಷಯದಲ್ಲಿ ಯಾರೂ ನಿರ್ಲಕ್ಷ್ಯ ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ ಎಡಿಸಿ, ಸಭೆಗಳನ್ನು ನಡೆಸುವುದರಿಂದ ದೌರ್ಜನ್ಯದಂಥ ಪ್ರಕರಣಗಳನ್ನು ತಳಮಟ್ಟದಲ್ಲಿಯೇ ಪರಿಹರಿಸುವ ಜತೆಗೆ ಸಂತ್ರಸ್ತರಿಗೆ ಶೀಘ್ರ ನ್ಯಾಯ ದೊರಕಿಸಿಕೊಡಬಹುದು. ಅಧಿಕಾರಿಗಳು ಹೆಚ್ಚಿನ ಕರ್ತವ್ಯನಿಷ್ಠೆ ತೋರಬೇಕು ಎಂದರು.


ನಿಗದಿತ ಮಾನದಂಡ ಅನುಸರಿಸಿ: ಎಸ್‌ಸಿ, ಎಸ್‌ಟಿ ಉಪಯೋಜನೆ ಕಾರ್ಯಕ್ರಮಗಳ ಅಡಿಯಲ್ಲಿ ಫಲಾನುಭವಿಗಳನ್ನು ಗುರುತಿಸಿ, ಸೌಲಭ್ಯಗಳನ್ನು
ತಲುಪಿಸಬೇಕು. ಫಲಾನುಭವಿಗಳಿಗೆ ಅದಕ್ಕೂ ಮುನ್ನ, ಫಲಾನುಭವಿಗಳ ಆಯ್ಕೆಗೆ ನಿಗದಿತ ಮಾನದಂಡಗಳನ್ನು ಅನುಸರಿಸಬೇಕು ಎಂದು ಎಡಿಸಿ ಸೂಚಿಸಿದರು. ಯಾವುದೇ ದೌರ್ಜನ್ಯ ಪ್ರಕರಣಗಳು ನಡೆದರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಎಸ್‌ಪಿ ವಂಶಿಕೃಷ್ಣ ತಿಳಿಸಿದರು.


ಎಸ್‌ಪಿಗೆ ಸದಸ್ಯರ ಧನ್ಯವಾದ: ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಘಟನೆಗಳ ಹೋರಾಟಗಾರರೊಬ್ಬರ ಹೆಸರನ್ನು ಸನ್ನಡತೆ ಆಧಾರದ ಮೇಲೆ ರೌಡಿಶೀಟರ್‌ನಿಂದ ತೆಗೆದು ಹಾಕಿರುವ ಬಗ್ಗೆ ಎಸ್‌ಪಿ ಡಾ. ಕೋನ ವಂಶಿಕೃಷ್ಣ ಮಾಹಿತಿ ನೀಡಿದರು. ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಕಳೆದ ಸಭೆಯಲ್ಲಿ ಮಾಡಿದ್ದ ಮನವಿಗೆ ಸ್ಪಂದಿಸಿ, ಕ್ರಮ ಕೈಗೊಂಡಿರುವುದಕ್ಕೆ ಸದಸ್ಯರು ಎಸ್‌ಪಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net