

ಮಂಡ್ಯ: ಪರಿಶಿಷ್ಟರಿಗೆ ಮೀಸಲಾದ ಟೆಂಡರ್‌ನಲ್ಲಿ ಹೆಚ್ಚು ದರ ನಮೂದಿಸಿದವರಿಗೆ ಅವಕಾಶ ನೀಡಿರುವುದಲ್ಲದೆ, ನಿಗದಿಗಿಂತ ಶೇ.5ರಷ್ಟು ಕಡಿಮೆ ದರ ನಮೂದಿಸಿದ್ದ ತಮ್ಮನ್ನು ಕೈಬಿಟ್ಟಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ ಎಂದು ಎಸ್ಸಿ, ಎಸ್ಟಿ ಗುತ್ತಿಗೆದಾರರ ಸಂಘದ ಕೊಳ್ಳೇಗಾಲ ತಾಲೂಕು ಕಾರ್ಯದರ್ಶಿ ಎಸ್.ರಾಜಪ್ಪ ತಿಳಿಸಿದರು.
ಮದ್ದೂರು ತಾಲೂಕಿನ ಮೂರು ಗ್ರಾಮಗಳ ಒಟ್ಟು 14 ಕಾಮಗಾರಿಯನ್ನು ಒಟ್ಟುಗೂಡಿಸಿ ಟೆಂಡರ್ ಕರೆಯಲಾಗಿತ್ತು. ಈ ಪ್ರಕ್ರಿಯಲ್ಲಿ ನಾನೂ ಭಾಗವಹಿಸಿದ್ದೆ. ಜತೆಗೆ, ಟೆಂಡರ್ ಮೊತ್ತಕ್ಕಿಂತ ಶೇ.5ರಷ್ಟು ಕಡಿಮೆ ಮೊತ್ತ ನಮೂದಿಸಿದ್ದೆ. ಆದರೂ ನನಗಿಂತ ಹೆಚ್ಚು ದರ ನಮೂದಿಸಿದವರಿಗೆ ಟೆಂಡರ್ ನೀಡಲಾಗಿದೆ. ಈ ಮೂಲಕ ಬಡ ಗುತ್ತಿಗೆದಾರನಾದ ನನಗೆ ಅನ್ಯಾಯ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಗುತ್ತಿಗೆದಾರರು ಸಲ್ಲಿಸಿದ್ದ ದಾಖಲೆಗಳಿಗೆ ದೃಢೀಕರಣ ಪಡೆಯುವ ಹಂತದಲ್ಲಿರುವಾಗಲೇ ಟೆಂಡರ್‌ಗಳನ್ನು ರದ್ದು ಮಾಡಲಾಗಿದೆ. ಇದಕ್ಕೆ ಯಾವುದೇ ಸಕಾರಣ ನೀಡಿಲ್ಲ. ಟೆಂಡರ್ ಶುಲ್ಕ ಮತ್ತು ಇಎಂಡಿ ಮೊತ್ತವನ್ನು ವಾಪಸ್ ನೀಡಲಾಗಿದೆ. ಕಾಮಗಾರಿಗಳನ್ನು ನಿರ್ವಹಿಸಿದರೆ ಮಾತ್ರ ಮುಂದಿನ ಟೆಂಡರ್‌ಗಳಲ್ಲಿ ಭಾಗವಹಿಸಲು ಅರ್ಹತಾ ಮಾನದಂಡ ಲಭ್ಯವಾಗುತ್ತವೆ. ಇಲ್ಲವಾದರೆ ಯಾವುದೇ ಟೆಂಡರ್‌ಗಳಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಈ ರೀತಿಯಾಗಿ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದು ದೂರಿದರು.
ಟೆಂಡರ್‌ಗಳ ವಿಚಾರದಲ್ಲಿ ಶಾಸಕರು, ಸಚಿವರು ಮಧ್ಯ ಪ್ರವೇಶ ಮಾಡುತ್ತಿದ್ದಾರೆ. ಇದರಿಂದ ಸಣ್ಣಸಣ್ಣ ಗುತ್ತಿಗೆದಾರರಿಗೆ ತುಂಬಾ ತೊಂದರೆಯಾಗುತ್ತಿದೆ. ಪ್ರಭಾವಿಗಳು ಹಾಗೂ ರಾಜಕೀಯ ನಾಯಕರ ಹಿಂಬಾಲಕ ಗುತ್ತಿಗೆದಾರರಿಗೆ ಮಾತ್ರ ಅವಕಾಶಗಳು ಸಿಗುತ್ತಿವೆ. ಜತೆಗೆ, ಹಲವು ಕಾಮಗಾರಿಗಳನ್ನು ಒಟ್ಟುಗೂಡಿಸಿ ಪ್ಯಾಕೇಜ್ ಟೆಂಡರ್ ಮಾಡಲಾಗುತ್ತಿದೆ. ಇದು ಸರಿಯಲ್ಲ. ಈ ಹಿನ್ನಲೆಯಲ್ಲಿ ಜೂ.4ರಂದು ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಪ್ರತಿ ಕಾಮಗಾರಿಗಳನ್ನು ಟೆಂಡರ್ ಮಾಡಬೇಕು. ಪ್ಯಾಕೇಜ್ ಟೆಂಡರ್ ನಿಲ್ಲಿಸಬೇಕು. ಪರಿಶಿಷ್ಟರ ಟೆಂಡರ್ ವಿಷಯದಲ್ಲಿ ಶಾಸಕರು, ಸಚಿವರು ಮಧ್ಯಪ್ರವೇಶ ನಿಲ್ಲಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೊರಾಟ ಡನೆಸಲಾಗುವುದು ಎಂದು ಎಚ್ಚರಿಸಿದರು.
ಸಂಘದ ರಾಜ್ಯ ಖಜಾಂಚಿ ಎಸ್.ಎನ್.ಹೇಮಕುಮಾರ್, ಮಾಜಿ ಜಿಲ್ಲಾಧ್ಯಕ್ಷ ಎಸ್.ಎಸ್.ಪ್ರಭಾಕರ್, ಮಾಜಿ ಕಾರ್ಯದರ್ಶಿ ಎಚ್.ಜೆ.ಯೋಗೇಶ್ ಹಾಜರಿದ್ದರು.