

ಮಂಡ್ಯ: ಪರಿಶಿಷ್ಟ ಜಾತಿ ಮತ್ತು ವರ್ಗಗಳ ಗುತ್ತಿಗೆದಾರರ ಆರ್ಥಿಕ ಸಬಲೀಕರಣಕ್ಕಾಗಿ ಗುತ್ತಿಗೆ ಕಾಮಗಾರಿಯಲ್ಲಿ ಮೀಸಲಾತಿಯನ್ನು ಸರ್ಕಾರ ಆದೇಶ ಹೊರಡಿಸಿದೆ. ಆದಾಗ್ಯೂ ಹೇಮಾವತಿ ನಾಲಾ ವಿಭಾಗ, ಕೆಆರ್‌ಎಸ್ ಮಳವಳ್ಳಿ ವಿಭಾಗದ ಇಂಜಿನಿಯರ್‌ಗಳು ಸಣ್ಣ ಸಣ್ಣ ಕಾಮಗಾರಿಗಳನ್ನು ಒಟ್ಟುಗೂಡಿಸಿ ಪ್ಯಾಕೇಜ್ ಮೂಲಕ ಟೆಂಡರ್ ಆಹ್ವಾನಿಸಿ ಪರಿಶಿಷ್ಟ ಗುತ್ತಿಗೆದಾರರನ್ನು ಮೀಸಲಾತಿಯಿಂದ ದೂರವಿಡುವ ಹುನ್ನಾರ ಮಾಡುತ್ತಿದ್ದಾರೆಂದು ಎಸ್ಸಿ, ಎಸ್ಟಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಎನ್.ಮಹದೇವಸ್ವಾಮಿ ಆರೋಪಿಸಿದರು.
ಕಾವೇರಿ ನೀರಾವರಿ ನಿಗಮದ ಜಿಲ್ಲೆಯ 7 ಹೇಮಾವತಿ ಎಡದಂಡೆ ನಾಲಾ ವಿಭಾಗ, ಕೃಷ್ಣರಾಜಸಾಗರ ಮಳವಳ್ಳಿ ವಿಭಾಗ ವಿಶ್ವೇಶ್ವರಯ್ಯ ವಿಭಾಗಗಳ ಕಾರ್ಯಪಾಲಕ ಇಂಜಿನಿಯರ್‌ಗಳು ಅನ್ಯಾಯ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಕೇಳಿದರೆ ಶಾಸಕರು ಪ್ಯಾಕೇಜ್ ಮಾಡಲು ಆದೇಶಿಸಿದ್ದಾರೆ ಎಂಬ ಕಾರಣ ನೀಡಿ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಪಾರದರ್ಶಕ ಕಾಯ್ದೆ ಉಲ್ಲಂಘನೆ ಮಾಡಿರುವ ಇಂಜಿನಿಯರ್ ವಿರುದ್ಧ ಸೆಕ್ಷನ್ 23ರಂದು ಕಾನೂನು ಕ್ರಮ ಜರುಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದು. ವಾರದೊಳಗೆ ಸರಿಪಡಿಸಿ ಎಸ್ಸಿ, ಎಸ್ಟಿ ಗುತ್ತಿಗೆದಾರರಿಗೆ ಸಣ್ಣ ಕಾಮಗಾರಿಗಳನ್ನು ನೀಡದಿದ್ದರೆ ಇಂಜಿನಿಯರ್‌ಗಳ ವಿರುದ್ಧ ಜಾತಿನಿಂದನೆ ಕಾಯ್ದೆಯಡಿ ದೂರು ದಾಖಲು ಮಾಡಲಾಗುವುದು. ಶಾಸಕರ ಮನೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಾದ ಹೇಮಂತ್‌ಕುಮಾರ್, ಎಸ್.ಡಿ.ಜಯರಾಂ, ಎಸ್.ಎಸ್.ಪ್ರಭಾಕರ್, ಯೋಗೇಶ್, ರಮೇಶ, ರಾಮಕೃಷ್ಣ ಇದ್ದರು.