

ಬೆಂಗಳೂರು: ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಜಾತಿ ಪ್ರಮಾಣ ಪತ್ರ ಪಡೆದು, ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸುವುದಾಗಿ ಜನರಿಗೆ ಬೆದರಿಸುತ್ತಿದ್ದ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ವಿಜಯನಗರದ ಕೇಶವ್ ಅಲಿಯಾಸ್ ರಾಜು (45) ಮತ್ತು ಈತನ ಪತ್ನಿ ಧನಲಕ್ಷ್ಮೀ (35) ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹಲಸೂರುಗೇಟ್ ಪೊಲೀಸರು ತಿಳಿಸಿದ್ದಾರೆ.
ಮಡಿವಾಳ ಸಮುದಾಯಕ್ಕೆ ಸೇರಿರುವ ಆರೋಪಿಗಳು, ನಕಲಿ ದಾಖಲೆಗಳನ್ನು ಸಲ್ಲಿಸಿ ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್ ಕಚೇರಿಯಿಂದ ಆದಿ ಕರ್ನಾಟಕ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದರು. ಹಂಪಿನಗರದಲ್ಲಿ ತಾವು ನೆಲೆಸಿರುವ ಸುತ್ತಮುತ್ತಲಿನ ನಿವಾಸಿಗಳ ಜತೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ತೆಗೆಯುತ್ತಿದ್ದರು. ತಾವು ಆದಿ ಕರ್ನಾಟಕ ಸಮುದಾಯಕ್ಕೆ ಸೇರಿದವರಾಗಿದ್ದು, ಜನರು ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ಕೊಡುತ್ತಿದ್ದರು.
ದಂಪತಿಯ ವಂಚನೆ ಕುರಿತು ಲಿಂಗರಾಜು ಎಂಬುವರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ಕೊಟ್ಟಿದ್ದರು. ಈ ದೂರನ್ನು ಬೆಂಗಳೂರು ನಗರ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಕಳುಹಿಸಲಾಗಿತ್ತು. ಪರಿಶೀಲನೆ ವೇಳೆ ಆದಿ ಕರ್ನಾಟಕ ಜಾತಿ ಹೆಸರಿನಲ್ಲಿ ಪ್ರಮಾಣ ಪತ್ರ ಪಡೆದಿರುವುದು ಬೆಳಕಿಗೆ ಬಂದಿದೆ.