

ಹುಬ್ಬಳ್ಳಿ: ಎಸ್ಸಿ ಎಸ್ಟಿ ಒಳಮೀಸಲಾತಿ ಉಪವರ್ಗೀಕರಣ ಕಾನೂನು ಬದ್ಧ ಎಂದು ಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ನಿಂದ ಐತಿಹಾಸಿಕ ತೀರ್ಪು ಬಂದ ಹಿನ್ನೆಲೆಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ನಗರದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ನಗರದ ರೈಲು ನಿಲ್ದಾಣ ಬಳಿಯ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮೋರ್ಚಾ ಕಾರ್ಯಕರ್ತರು ಜಯಘೋಷ ಮೊಳಗಿಸಿದರು.
ಒಳಮೀಸಲಾತಿಗಾಗಿ ದಶಕಗಳಿಂದ ಹೋರಾಟ ನಡೆದಿತ್ತು. ಹಿಂದಿನ ಬಿಜೆಪಿ ಸರ್ಕಾರ ಒಳಮೀಸಲಾತಿ ಪರವಾಗಿ ವರದಿ ನೀಡಿತ್ತು. ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರು ಮೀಸಲಾತಿ ಪರ ಕೆಲಸ ಮಾಡಿದ್ದರು.
ಸುಮಾರು ಮೂರು ದಶಕದ ಹೋರಾಟಕ್ಕೆ ಇದೀಗ ನ್ಯಾಯ ಸಿಕ್ಕಿದೆ ಎಂದು ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.
ಮೋರ್ಚಾದ ಸಂಗಮೇಶ ಮಾದರ, ರಾಮಚಂದ್ರ, ಸಂತೋಷ್ ಸವಣೂರ, ಅರ್ಜುನ್ ಮಾದರ, ಬಸವರಾಜ ಚಳಗೇರಿ, ಮಡವಾಳಿ ಮಾದರ ಇತರರು ಇದ್ದರು.