ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದಿಂದ ಮೈಸೂರಿನಲ್ಲಿ ಪ್ರಗತಿ ಪರಿಶೀಲನೆ

sc national commission meeting
Published on

ಮೈಸೂರು: ಪರಿಶಿಷ್ಟ ಜಾತಿ ಜನರ ಶ್ರೇಯೋಭಿವೃದ್ಧಿಗೆ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಆಗಬೇಕು ಎಂದು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಸದಸ್ಯೆ ಡಾ.ಅಂಜು ಬಾಲಾ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಜನ್‌ಧನ್ ಯೋಜನೆಯಡಿ ಹಲವು ಉಪಯೋಗಗಳುಂಟಾಗುತ್ತಿದ್ದು, ಯೋಜನೆಯಿಂದ ವಂಚಿತರಾದವರನ್ನು ಗುರುತಿಸಿ ಅವರಿಗೆ ಈ ಯೋಜನೆಗಳ ಫಲ ದೊರಕುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಿದ್ಯಾಭ್ಯಾಸ ಸಾಲದ ಬಗ್ಗೆ ಆದ್ಯತೆ ವಹಿಸಬೇಕು. ಪ್ರತಿಯೊಂದು ಸಾಲಗಳು ಯಾವ ಕಾರಣಕ್ಕೆ ತಿರಸ್ಕಾರ ಆಗುತ್ತಿದೆ ಎಂಬ ಕುರಿತು ಮಾಹಿತಿ ಕಲೆ ಹಾಕಿ ಸಭೆ ನಡೆಸಿ ಗಂಭೀರವಾದ ಕ್ರಮಗಳನ್ನು ಕೈಗೊಳ್ಳಬೇಕು. ಆಯೋಗವು ಮಾಹಿತಿ ಬೇಕಾದಾಗ ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯುತ್ತದೆ. ಪತ್ರಕ್ಕೆ 15 ದಿನದ ಒಳಗೆ ಉತ್ತರ ನೀಡಬೇಕು, ಇಲ್ಲವಾದರೆ ಅದರ ಪರಿಣಾಮ ಬೇರೆ ರೀತಿ ಇರುತ್ತದೆ. ಆಯೋಗಕ್ಕೆ ಯಾರಿಗೂ ತೊಂದರೆ ನೀಡುವ ಉದ್ದೇಶವಿಲ್ಲ, ಆದರೆ ಅಧಿಕಾರಿಗಳು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಹಾಗೂ ನ್ಯಾಯಸಮ್ಮತವಾಗಿ ಮಾಡಬೇಕು. ಕಳೆದ ಬಾರಿ ಪ್ರಗತಿ ಪರಿಶೀಲನಾ ಸಭೆಗೆ ಹೋಲಿಕೆ ಮಾಡಿದರೆ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಇಲಾಖೆಯು ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಶ್ಲಾಘಿಸಿದರು.

ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಮತ್ತೊಂದು ಸಭೆ ನಡೆಸಲಾಗುವುದು. ಆ ಸಭೆಯಲ್ಲಿ ಆಯೋಗದ ಅಧ್ಯಕ್ಷರು ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಪ್ರತಿಯೊಬ್ಬರನ್ನು ಪ್ರಶ್ನಿಸಲಾಗುವುದು, ಎಲ್ಲದಕ್ಕೂ ತಯಾರಿ ನಡೆಸಿಕೊಳ್ಳಿ. ಎಲ್ಲ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಪ್ರಸಾದ್ ಮಾತನಾಡಿ, ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಜನನಿ ಸುರಕ್ಷಾ ಯೋಜನೆಯಡಿ 2020-21 ನೇ ಸಾಲಿನಲ್ಲಿ 21,076 ಫಲಾನುಭವಿಗಳಿದ್ದು ಶೇ.25 ರಷ್ಟು ಫಲಾನುಭವಿಗಳು ಪರಿಶಿಷ್ಟ ಜಾತಿಯವರಾಗಿದ್ದಾರೆ. 2022-23ನೇ ಸಾಲಿಗೆ 9,131 ಫಲಾನುಭವಿಗಳಿದ್ದು ಅದರಲ್ಲಿ 1,944 ಜನ ಪರಿಶಿಷ್ಟ ಜಾತಿಯವರಾಗಿದ್ದಾರೆ ಎಂದರು.

ಸಭೆಯಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಅಂಕಿ ಅಂಶಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಶಾಲೆಗಳಲ್ಲಿ ದಾಖಲಾತಿ ಬಗ್ಗೆ ಅಗತ್ಯ ಕ್ರಮವಹಿಸಲಾಗಿದ್ದು, ಕಡಿಮೆಯಾದರೆ ಅದರ ಬಗ್ಗೆ ವಿಶೇಷ ಸಭೆ ನಡೆಸಿ ಏಕೆ ಕಡಿಮೆಯೋಗುತ್ತಿದೆ ಎನ್ನುವುದರ ಬಗ್ಗೆ ಚರ್ಚೆ ನಡೆಸಲಾಗುವುದು. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯವರ ಸಂಖ್ಯೆ ಹೆಚ್ಚಿದ್ದು ಪರಿಶಿಷ್ಟ ಜಾತಿಯ ಮಕ್ಕಳು ಶಾಲೆಗೆ ಏಕೆ ಬರುತ್ತಿಲ್ಲ ಎಂಬುದರ ಬಗ್ಗೆ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಾಗುತ್ತಿದೆ. ಪ್ರತಿಷ್ಠಿತ ಶಾಲೆಗಳ ಸ್ಕೀಮ್ಗಳ ಅಡಿಯಲ್ಲಿ ಶಾಲೆಗಳನ್ನು ಗುರುತಿಸಿ ಅಲ್ಲಿಗೆ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಸಲು ಅಗತ್ಯ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ಜಿಲ್ಲೆಯಲ್ಲಿ ಎಷ್ಟು ಮನೆಗಳು ಮಂಜೂರಾಗಿದೆ ಎಂಬುವುದರ ಬಗ್ಗೆ ಮಾಹಿತಿ ಪಡೆದುಕೊಂಡು ಆಯೋಗಕ್ಕೆ ಜಿಲ್ಲಾಧಿಕಾರಿ ಸಮಗ್ರವಾಗಿ ಮಾಹಿತಿ ನೀಡಿದರು. ಅದರಂತೆ 2021 ಮತ್ತು 22ನೇ ಸಾಲಿನಲ್ಲಿ 409 ಮನೆಗಳಿಗೆ ಗುರಿ ನೀಡಿದ್ದು ಅದರಲ್ಲಿ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ 297 ಮನೆಗಳು ಹಂಚಿಕೆಯಾಗಿದೆ. ಮನೆಗಳ ನಿರ್ಮಾಣಕ್ಕೆ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಕಡೆಯಿಂದ ಸಹಾಯಧನ ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರದಿಂದ 1.50 ಲಕ್ಷ ರೂ ಹಾಗೂ ರಾಜ್ಯ ಸರ್ಕಾರದಿಂದ ಅಂಬೇಡ್ಕರ್ ವಸತಿ ಯೋಜನೆಯಡಿ 3.50 ಲಕ್ಷ ರು ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ, ಡಿಸಿಪಿ ಮುತ್ತುರಾಜ್ ಎಎಸ್‌ಪಿ ನಂದಿನಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net