

ಕಾರವಾರ: ಜಿಲ್ಲೆಯ ಮೊಗೇರರಿಗೆ ಎಸ್‌ಸಿ ಜಾತಿ ಪ್ರಮಾಣಪತ್ರ ಕೊಟ್ಟಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಜಿಲ್ಲೆಯ ವಿವಿಧ ದಲಿತ ಸಂಘಟನೆಗಳ ಮುಖಂಡರು ಎಚ್ಚರಿಸಿದ್ದಾರೆ.
ನಗರದಲ್ಲಿ ಭಾನುವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ದಲಿತ ಸಂಘರ್ಷ ಸಮಿತಿ, ದಲಿತ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ ಕೆಂಪು ಸೇನೆ ಮುಂತಾದ ಎಲ್ಲ ಸಂಘಟನೆಯವರು, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಎಸ್.ಫಕೀರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸುಳ್ಳು ಜಾತಿ ಪ್ರಮಾಣಪತ್ರದ ವಿರುದ್ಧ ಕಳೆದ 25 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಪರಿಣಾಮ ಜಿಲ್ಲೆಯ ಮೀನುಗಾರ ಸಮುದಾಯಕ್ಕೆ ಸೇರಿದ ಮೊಗೇರರಿಗೆ ಎಸ್‌ಸಿ ಪ್ರಮಾಣಪತ್ರ ನೀಡುವುದನ್ನು 2001- 2002 ರಲ್ಲಿ ನಿಲ್ಲಿಸಲಾಯಿತು.
ಆದರೆ, ಈಗ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮತ್ತೆ ಮೊಗೇರರಿಗೆ ಎಸ್‌ಸಿ ಪ್ರಮಾಣಪತ್ರ ನೀಡಲು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅದಕ್ಕೆ ಒಪ್ಪದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ವರ್ಗಾಯಿಸಿದ್ದಾರೆ ಎಂಬ ಮಾಹಿತಿಯೂ ಇದೆ. ಹಾಗೇನಾದರೂ ಮೊಗೇರರಿಗೆ ಮತ್ತೆ ಪ್ರಮಾಣಪತ್ರ ನೀಡಲು ಮುಂದಾದರೆ, ನಾವು ತೀವ್ರ ಹೋರಾಟ ಮಾಡಲಿದ್ದೇವೆ ಎಂದರು.
ಇದನ್ನೂ ಓದಿ:ಎಲ್ಲ ತಾಲೂಕುಗಳಲ್ಲಿ ಎಸ್‌ಸಿ,ಎಸ್‌ಟಿ ಅಹವಾಲು ಸಭೆ-ಎಸ್‌ಪಿ
ವಕೀಲ ರವೀಂದ್ರ ಮಾತನಾಡಿ, ಪರಿಶಿಷ್ಟರಲ್ಲದವರಿಗೆ ಜಾತಿ ಪ್ರಮಾಣಪತ್ರ ನೀಡುವುದರಿಂದ ನೈಜ ಪರಿಶಿಷ್ಟರಿಗೆ ಅನ್ಯಾಯವಾಗುತ್ತಿದೆ. ಉತ್ತರ ಕನ್ನಡದ ಮೊಗೇರರ ಪ್ರಕರಣವು, ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಇತ್ಯರ್ಥವಾಗಿದೆ.
ಮೈಸೂರು ವಿವಿ ತಜ್ಞರು ನಡೆಸಿದ ಕುಲ ಶಾಸ್ತ್ರೀಯ ಅಧ್ಯಯನದಲ್ಲೂ ಮೊಗೇರರು ಪರಿಶಿಷ್ಟರಲ್ಲ ಎಂದು ತಿಳಿಸಲಾಗಿದೆ. ಸರ್ಕಾರ ವರದಿಯನ್ನು ಒಪ್ಪಿದೆ ಎಂದು ವಿವರಿಸಿದರು.
ತುಳಸಿದಾಸ ಪಾವಸ್ಕರ್ ಮಾತನಾಡಿ, ಈ ಹಿಂದೆ ಮೊಗೇರರಿಗೆ ನೀಡಿರುವ ಎಸ್‌ಸಿ ಪ್ರಮಾಣಪತ್ರವನ್ನು ಹಿಂಪಡೆಯಬೇಕು ಎಂದಿ ಒತ್ತಾಯಿಸಿದರು.
ದೀಪಕ ಕುಡಾಳಕರ್ ಮಾತನಾಡಿ, ಈಗ ಚುನಾವಣೆ ಹಾಗೂ ಇತರ ಸೌಲಭ್ಯಗಳನ್ನು ಜಾತಿ ಪ್ರಮಾಣಪತ್ರದ ಆಧಾರದ ಮೇಲೆ ನೀಡುವಾಗ ಆರ್‌ಡಿ ಸಂಖ್ಯೆ ಇರುವ ಹೊಸ ಜಾತಿ ಪ್ರಮಾಣಪತ್ರಗಳನ್ನು ಮಾತ್ರ ಪರಿಗಣಿಸಬೇಕು.
ಸರ್ಕಾರಿ ಮೆಡಿಕಲ್ ಕಾಲೇಜ್ ನಲ್ಲಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಲ್ಲಿ ಬಂದ ವಿದ್ಯಾರ್ಥಿ ವೇತನ ವಿತರಣೆ ವಿಳಂಬವಾಗುತ್ತಿದೆ. ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಸಿಗುತ್ತಿಲ್ಲ. ಈ ಬಗ್ಗೆ ದೂರು ನೀಡಿದರೂ ಕ್ರಮವಾಗಿಲ್ಲ ಎಂದರು.
ದಲಿತ ಸಂಘಟನೆಗಳ ಮುಖಂಡರಾದ ಬಸವರಾಜ್, ಎಲಿಷಾ ಎಲಕಪಾಟಿ, ತುಳಸಿದಾಸ ಪಾವಸ್ಕರ್ ,ಶಂಕರ ಹಳಕಾರ, ರಾಮಚಂದ್ರ ವಡ್ಡರ್, ಕಿರಣ ಶಿರೂರು ಇತರರು ಮಾತನಾಡಿದರು.