‘ಮಹಮ್-2023’ ರಾಷ್ಟ್ರೀಯ ಫೆಸ್ಟ್ ಸಂಭ್ರಮ

5
ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಮಹಮ್-2023’ ರಾಷ್ಟ್ರೀಯ ಫೆಸ್ಟ್‌ನ್ನು ಸ್ಯಾಮ್‌ಚೆರಿಯನ್ ಉದ್ಘಾಟಿಸಿದರು. ಟಿ.ಮುರಳೀಧರ್ ಭಾಗವತ್, ಡಾ.ಟಿ.ವಿಜಯಲಕ್ಷ್ಮೀ ಮುರಳೀಧರ್, ಬಿ.ಆರ್.ಜಯಕುಮಾರಿ, ಡಾ.ಎಸ್.ಆರ್.ರಮೇಶ್, ಡಾ.ಎಚ್.ಆರ್.ತಿಮ್ಮೇಗೌಡ ಇದ್ದರು.
Published on

ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಜವಾಬ್ದಾರಿ, ಆಸಕ್ತಿ, ಉತ್ಸಾಹ ಹಾಗೂ ಸಾಧಿಸುವ ಮನಸ್ಥಿತಿ ಮುಖ್ಯ ಎಂದು ಉದ್ಯಮಿ ಸ್ಯಾಮ್‌ಚೆರಿಯನ್ ಸಲಹೆ ನೀಡಿದರು.

ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಕಾಲೇಜಿನ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಮಹಮ್-2023’ ರಾಷ್ಟ್ರೀಯ ಫೆಸ್ಟ್ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜವಾಬ್ದಾರಿ ಇದ್ದರೆ ಯಾವ ಸೋಲೂ ಸುಳಿಯುವುದಿಲ್ಲ. ವಿದ್ಯಾರ್ಥಿಗಳು ಸದಾ ಮನದಲ್ಲಿ ತಮ್ಮ ಉದ್ದೇಶದ ಬಗ್ಗೆ ಜಾಗೃತರಾಗಿರಬೇಕು. ಅಲ್ಲದೆ, ಬದ್ಧತೆ ಮತ್ತು ಪರಿಶ್ರಮವನ್ನು ತಮ್ಮ ಕೆಲಸದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿ ಪ್ರಸ್ತುತ ವಿದ್ಯಮಾನಗಳ ಕುರಿತು ಪರಿಣಿತಿ ಹೊಂದುತ್ತಿರಬೇಕು. ಸಂಘಟಿತ ಮತ್ತು ರಚನಾತ್ಮಕ ಜೀವನವನ್ನು ಅಳವಡಿಸಿಕೊಳ್ಳಬೇಕು. ಯಶಸ್ಸಿಗೆ ವಯಸ್ಸು ಮತ್ತು ಸಮಯದ ಮಿತಿಯಿಲ್ಲ. ಮಹಾಜನ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಕಲೆ ಮತ್ತು ಸಾಂಸ್ಕೃತಿಕ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆಯನ್ನು ಹಿಂದಿನಿಂದಲೂ ಕಲ್ಪಿಸಿಕೊಡುತ್ತಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಹಿನ್ನೆಲೆ ಗಾಯಕಿ ಅನನ್ಯಭಟ್ ಮುಂತಾದವರ ಸಾಧನೆಗಳು ಅವಿಸ್ಮರಣೀಯ. ಮಹಾಜನ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡಿದವರು ಇಂದು ವಿಶ್ವದೆಲ್ಲೆಡೆ ಇದ್ದಾರೆ ಎಂದರು.

ಮಹಾಜನ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಮುರಳೀಧರ್ ಭಾಗವತ್ ಮಾತನಾಡಿ, ‘ಮಹಮ್-2023 ಫೇಸ್ಟ್’ ಅಂಗವಾಗಿ ಈ ಹಿಂದೆ ಆಯೋಜಿಸಿದ್ದ ಆಟೋ ಎಕ್ಸ್‌ಪೋ ಮತ್ತು ಕೆರಿಯರ್ ಎಕ್ಸ್‌ಪೋ ಎರಡೂ ಕಾರ್ಯಕ್ರಮಗಳಿಂದ ಹಲವು ಕೈಗಾರಿಕಾ ಸಂಸ್ಥೆಗಳೊಡನೆ ಮಹಾಜನ ವಿದ್ಯಾಸಂಸ್ಥೆಯ ಸಂಬಂಧ ಗಟ್ಟಿಯಾಗಿದೆ. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಪೂಜಾಭಾಗವತ್ ಸ್ನಾತಕೋತ್ತರ ಕೇಂದ್ರಕ್ಕೆ ಸೇರುವ ಎಲ್ಲ ವಿದ್ಯಾರ್ಥಿಗಳಿಗೆ ಮಹಾಜನ ವಿದ್ಯಾಸಂಸ್ಥೆ ವಿದ್ಯಾರ್ಥಿ ವೇತನ ನೀಡುತ್ತದೆ ಎಂದು ಭರವಸೆ ನೀಡಿದರು. ಅಲ್ಲದೆ, ಸ್ನಾತಕೋತ್ತರ ಕೇಂದ್ರದ ಜೀವವಿಜ್ಞಾನ ವಿಭಾಗದಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಪ್ರಯೋಗಾಲಯಗಳ ನವೀಕರಣಕ್ಕೆ ಸಿದ್ಧತೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವಿದ್ಯಾಸಂಸ್ಥೆಯ ಗೌ.ಕಾರ್ಯದರ್ಶಿ ಡಾ.ಟಿ.ವಿಜಯಲಕ್ಷ್ಮೀ ಮುರಳೀಧರ್, ಪ್ರಾಂಶುಪಾಲರಾದ ಬಿ.ಆರ್.ಜಯಕುಮಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆರ್.ರಮೇಶ್, ಮಹಮ್ -2023 ರಾಷ್ಟ್ರೀಯ ಫೆಸ್ಟ್‌ನ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎಚ್.ಆರ್.ತಿಮ್ಮೇಗೌಡ, ವಿದ್ಯಾರ್ಥಿ ಸಂಯೋಜಕರಾದ ರಿಷಬ್, ದೀಕ್ಷಿತ್, ಭೂಮಿಕಾ, ಜೋಯಿಸ್ ಇದ್ದರು.


ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಿಯಾಲಿಟಿ ಷೋ ನಿರೂಪಕ ನಿರಂಜನ್ ದೇಶಪಾಂಡೆ, ಚಲನಚಿತ್ರನಟಿ ಮಯೂರಿ, ಬಿಗ್‌ಬಾಸ್ ಖ್ಯಾತಿಯ ದೀಪಿಕಾ ದಾಸ್ ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net