ಎಸ್‌ಬಿಐ ಬ್ಯಾಂಕಿನಲ್ಲಿ ಭಾರತ ವಿಭಜನೆ ಕರಾಳ ದಿನದ ವಸ್ತು ಪ್ರದರ್ಶನ

Sbi Bank
Published on

ಮಂಡ್ಯ: ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನೇ ಪುಡಿಪಾಗಿಟ್ಟಿದ್ದಾರೆ. ಅವರ ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಎಸ್‌ಬಿಐ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕಿ ಸಂಧ್ಯಾ ಹೇಳಿದರು.

ನಗರದ ಎಸ್‌ಬಿಐ ಬ್ಯಾಂಕಿನಲ್ಲಿ ಭಾರತ ವಿಭಜನೆ ಕರಾಳ ದಿನದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತ ವಿಭಜನೆ ಕಾಲದಲ್ಲಿ ನಮ್ಮ ಸೋದರ ಸೋದರಿಯರು ಅನುಭವಿಸಿದ ಯಾತನೆಗಳನ್ನು ತಿಳಿಸಲು ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಚಂದ್ರು ಮಾತನಾಡಿ, ರಾಜಕೀಯ ಇಂದು ಭ್ರಷ್ಟಾಚಾರದಿಂದ ಕೂಡಿದೆ. ಹಣ ಹಂಚುವ ಮೂಲಕ ಮತಗಳನ್ನು ಕೊಂಡುಕೊಳ್ಳುವುದಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಇದು ದುರಂತ, ಇಂತಹವರಿಂದ ದೇಶದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ವಿಷಾದಿಸಿದರು.

ಎಸ್‌ಬಿಐ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರಾದ ಇಂದ್ರೇಶ್, ನಿವೃತ್ತ ಸೈನಿಕ ರವೀಂದ್ರ ಇತರರಿದ್ದರು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ನಿವೃತ್ತ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net