

ಮಂಡ್ಯ: ಪಾಲಕರು ತಮ್ಮ ಮಕ್ಕಳಿಗೆ ಆಸ್ತಿಯನ್ನು ಮಾಡದೆ, ಅವರನ್ನೇ ಆಸ್ತಿಯನ್ನಾಗಿ ಮಾಡಿದರೆ ಪ್ರಪಂಚದಲ್ಲಿ ಎಲ್ಲಿ ಬೇಕಾದರೂ ಜೀವನ ಮಾಡುತ್ತಾರೆ ಎಂದು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಎಸ್.ಬಿ ಎಜುಕೇಷನ್ ಟ್ರಸ್ಟ್‌ನ ಗೀತಾಂಜಲಿ ಇಂಟರ್‌ನ್ಯಾಷನಲ್ ಸ್ಕೂಲ್ ವತಿಯಿಂದ ಆಯೋಜಿಸಿದ್ದ ‘ಗೀತಾಂಜಲಿ ಅಂತರಂಗ ಕಲೆಯ ಪ್ರತಿಬಿಂಬ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಸವಲತ್ತುಗಳನ್ನು ಪಾಲಕರು ಒದಗಿಸಿದರೆ, ಉತ್ತಮ ಪ್ರಜೆಯಾಗಿ ರಾಷ್ಟ್ರಕ್ಕೆ ಕೊಡುಗೆ ಕೊಡುತ್ತಾರೆ ಎಂದರು.
ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣ ಕೊಡಬೇಕು. ಶಾಲೆಗಿಂತ ಹೆಚ್ಚು ದಿನ ಪಾಲಕರ ಹತ್ತಿರ ಮಕ್ಕಳು ಇರುತ್ತಾರೆ. ಮಗುವಿನ ಹಾಗು ಹೋಗುಗಳನ್ನು ನೋಡುವುದು ಅವರ ಆದ್ಯ ಕರ್ತವ್ಯವಾಗಿದೆ. ತಿಂಗಳಿಗೆ ಒಂದು ಭಾರಿಯಾದರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಮಗುವಿನ ವಿದ್ಯಾಭ್ಯಾಸದ ಕಡೆ ಗಮನ ಕೊಟ್ಟರೆ ಮೌಲ್ಯಧಾರಿತ ಶಿಕ್ಷಣ ಪಡೆಯುತ್ತಾರೆ. ಮಕ್ಕಳಲ್ಲಿ ಭಿನ್ನ-ಭಿನ್ನ ಸಾಮರ್ಥ್ಯಗಳಿರುತ್ತವೆ. ಆದ್ದರಿಂದ ಬೇರೆ ಮಕ್ಕಳ ಜತೆ ಹೋಲಿಕೆ ಮಾಡುವುದು ಬೇಡ. ಜೀವನ ನಡೆಸಲು ಹಲವಾರು ಮಾರ್ಗಗಳಿವೆ. ಆದ್ದರಿಂದ ಹೋಲಿಕೆ ಮಾಡುವುದರಿಂದ ಮಕ್ಕಳು ಖಿನ್ನತೆಗೊಳಗಾಗುತ್ತವೆ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಬಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಶಿವಲಿಂಗಯ್ಯ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಕಸರತ್ತು ಮಾಡಿದಾಗ ಸರ್ವ ರೀತಿಯಲ್ಲೂ ಬೆಳೆಯಲು ಸಾಧ್ಯ. ಬೇರೆ ದೇಶದಲ್ಲೂ ಭಾರತದವರು ಪ್ರಧಾನಮಂತ್ರಿಯಾಗುತ್ತಿದ್ದಾರೆ. ಎಲ್ಲರೂ ಸೇರಿ ಮಕ್ಕಳನ್ನು ಉತ್ತಮ ಪ್ರಜೆಯಾಗಿ ಮಾಡಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಎಸ್.ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಮಾತನಾಡಿ, ಪಾಲಕರು ಮಕ್ಕಳಿಗೆ ಆದರ್ಶ ನಡೆ ನುಡಿಯ ಬಗ್ಗೆ ತಿಳಿಸಬೇಕು. ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಬೆಳೆಸಬೇಕು. ಪ್ರಮುಖವಾಗಿ ಮೊಬೈಲ್ನಿಂದ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ಟಿ.ರಾಜೇಂದ್ರ ಮಕ್ಕಳಿಗೆ ಬಹುಮಾನ ವಿತರಿಸಿದರು. ಪ್ರಾಂಶುಪಾಲೆ ಎಚ್.ಸರೋಜ, ಮುಖ್ಯಶಿಕ್ಷಕ ವಿ.ಡಿ.ರಾಜಣ್ಣ ಇತರರಿದ್ದರು.