

ಮಂಗಳೂರು: ಮಾನವ ಸಂಘ ಜೀವಿಯಾಗಿದ್ದು, ಪ್ರತಿಯೊಬ್ಬನಿಗೂ ರಕ್ತದಾನದ ಜಾಗೃತಿ ಅಗತ್ಯ. ಯುವ ಸಮುದಾಯ ಈ ದೇಶದ ಶಕ್ತಿಯಾಗಿರುವ ಕಾರಣ ನಮ್ಮ ದೇಶದಲ್ಲಿ ರಕ್ತದಾನದ ಕೊರತೆ ಯಾವತ್ತೂ ಬರಬಾರದು. ಈ ಕಾರಣದಿಂದ ರಕ್ತದಾನದ ಜಾಗತಿ ಹೆಚ್ಚು ಹೆಚ್ಚು ಆಗಬೇಕಿದೆ ಎಂದು ಶಿರಿಡಿ ಸಾಯಿಬಾಬಾ ಮಂದಿರ ಸೇವಾ ಟ್ರಸ್ಟ್‌ನ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ಹೇಳಿದರು.
ಶಿರಿಡಿ ಸಾಯಿಬಾಬಾ ಮಂದಿರ ಸೇವಾ ಟ್ರಸ್ಟ್ ಆಶ್ರಿತ ಸಾಯಿ ಶಕ್ತಿ ಬಳಗದಿಂದ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಹಾಸ್ಪಿಟಲ್ ಸಹಕಾರದೊಂದಿಗೆ ಗುರುವಾರ ನಡೆದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಪ್ರಬುದ್ಧನಾದ ಆರೋಗ್ಯವಂತ ಕನಿಷ್ಠ 6 ತಿಂಗಳಿಗೊಮ್ಮೆ ರಕ್ತದಾನ ಮಾಡಿದರೆ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು ಸಾಧ್ಯ. ಮಾನವೀಯತೆಯ ಪ್ರತೀಕವಾಗಿರುವ ನಾವು ರಕ್ತದಾನಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಟ್ರಸ್ಟ್‌ನಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದರು.
ಶಿರಿಡಿ ಸಾಯಿಬಾಬಾ ಮಂದಿರ ಸೇವಾ ಟ್ರಸ್ಟ್‌ನ ಟ್ರಸ್ಟಿ ಲಾವಣ್ಯ ವಿಶ್ವಾಸ್‌ದಾಸ್, ಕೆ.ಎಸ್. ಹೆಗ್ಡೆ ಬ್ಲಡ್ ಸೆಂಟರ್ ಮೆಡಿಕಲ್ ಆಫೀಸರ್‌ಗಳಾದ ಡಾ.ಚಂದ್ರಿಕಾ, ಡಾ.ಶ್ರೀಲೇಖಾ, ತಾಂತ್ರಿಕ ನಿರ್ವಾಹಕರಾದ ಮರಿಯಾ, ಶಿರಿಡಿ ಸಾಯಿ ಮಂದಿರದ ಪ್ರತಿನಿಧಿಗಳಾದ ಕಿಶೋರ್, ರವಿ ದಂಬೆಲ್, ಕಿರಣ್, ಭಾಸ್ಕರ್ ಮರೋಳಿ ಮತ್ತಿತರರು ಉಪಸ್ಥಿತರಿದ್ದರು.