

ಚಿಕ್ಕಬಳ್ಳಾಪುರ: ಶ್ರೀ ಸತ್ಯಸಾಯಿ ಬಾಬಾರ 96ನೇ ಜನ್ಮದಿನಾಚರಣೆ ಅಂಗವಾಗಿ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯಲ್ಲಿ ಕೈಗೊಂಡಿರುವ ಏಳು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿಶ್ವಯುವ ಸಮ್ಮೇಳನಕ್ಕೆ ಬುಧವಾರ ಚಾಲನೆ ನೀಡಲಾಯಿತು.
ನ.17 ರಿಂದ ನ.23 ರವರೆಗೆ ಆಧ್ಯಾತ್ಮಿಕ, ಸಾಂಸ್ಕೃತಿಕ, ಉಪನ್ಯಾಸ, ಸೇವಾ ಚಟುವಟಿಕೆಯ ಮೂಲಕ ಬಾಬಾ ಜನ್ಮ ದಿನಾಚರಣೆ ನಡೆಯಲಿದ್ದು, ಇದರ ಭಾಗವಾಗಿ ಶ್ರೀ ಸತ್ಯಸಾಯಿ ಪ್ರೇಮಾಮೃತಂ ಸಭಾಭವನದಲ್ಲಿ ಮೊದಲ ದಿನ ‘ಭಾರತ ಸಂಗೀತ’ ಸಮ್ಮೇಳನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
ಆಧ್ಯಾತ್ಮಿಕತೆ ಭಾರತದ ನೆಲೆಗಟ್ಟು. ಭಾವ, ರಾಗ, ತಾಳಗಳ ಮಿಡಿತದಿಂದ ಉಂಟಾದ ಸಂಸ್ಕಾರ ಸಂಸ್ಕೃತಿಯೇ ಇದರ ಜೀವಾಳ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದರು.
ಸಂಗೀತವು ಹೃದಯದ ಭಾಷೆಯಾಗಿದೆ. ಇದಕ್ಕೆ ಅವ್ಯಕ್ತ ರೂಪದಿಂದ ವ್ಯಕ್ತವಾಗಿ ಹೃದಯಕ್ಕೆ ಹೃದಯವನ್ನು ಬೆಸೆಯುವ ಮಾಂತ್ರಿಕ ಶಕ್ತಿ ಇದೆ. ದೇಹ ಮತ್ತು ಬುದ್ಧಿಯನ್ನು ಏಕಕಾಲದಲ್ಲಿ ಏಕತ್ವದಲ್ಲಿ ವಿಲೀನಗೊಳಿಸಿ ಪರಮಾನಂದ ಸ್ವರೂಪಿಯ ಪರಮ ಆನಂದವನ್ನು ಕರುಣಿಸುವ ಚೈತನ್ಯ ಎಂದರು.
ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ.ಎನ್.ನರಸಿಂಹಮೂರ್ತಿ ಮಾತನಾಡಿ, ಭಾರತದ ಸಂಸ್ಕೃತಿಯು ವೇದ, ನಾದ, ಕಾವ್ಯಗಳ ಮಿಲನವಾಗಿದೆ. ಭಾರತೀಯ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಮರುಮನನ ಮಾಡಿ, ಪ್ರಪಂಚದ ಶ್ರೇಷ್ಠ ಸಂಸ್ಕೃತಿಯನ್ನು ಜಗದ ಉದ್ದಗಲಕ್ಕೂ ಪಸರಿಸುವ ಉದ್ದೇಶವನ್ನು ಸಮ್ಮೇಳನ ಹೊಂದಿದೆ ಎಂದರು.
ಸಂಗೀತದ ಬಹುಭಾಗ ಪಾರಮಾರ್ಥಿಕ ಜೀವನದ ಮಹತ್ವವನ್ನು ಪ್ರತಿಪಾದಿಸುತ್ತದೆ. ಅಲ್ಪ ಭಾಗ ಮಾತ್ರ ವಿನೋದವನ್ನು ನೀಡುತ್ತದೆ. ಜಗತ್ತಿನ ಸಂಗೀತ ಪರಂಪರೆಯಲ್ಲಿ ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಪ್ರಮುಖ ಮಜಲುಗಳು ಎಂದು ಗಾನಕಲಾ ಭೂಷಣ ಆರ್.ಕೆ.ಪದ್ಮನಾಭ ತಿಳಿಸಿದರು.
ಮಾಂತ್ರಿಕ ಸ್ಪರ್ಶದ ಸಂಗೀತದ ಕುರಿತ ಗೋಷ್ಠಿ, ಸಂವಾದಗಳು ಮತ್ತು ಕಲಾ ಪ್ರದರ್ಶನ ಸೇರಿ ವಿವಿಧ ಕಾರ್ಯಕ್ರಮಗಳು ಗಮನ ಸೆಳೆದವು. ಪ್ರಸಿದ್ಧ ಕೊಳಲು ವಾದಕ ಪಂಡಿತ ರೋಣು ಮಜುಂದಾರ್, ಸಮ್ಮೇಳನ ಸಂಘಟಕ ಮೈಸೂರು ಮಂಜುನಾಥ್, ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಉಪಕುಲಪತಿ ಶ್ರೀಕಂಠಮೂರ್ತಿ ಮತ್ತಿತರರು ಇದ್ದರು.