

ಮಂಗಳೂರು : ನಗರದ ಕುಡುಪುಕಟ್ಟೆಯ ಇಸ್ಕಾನ್ ವತಿಯಿಂದ ನಶಾ ಮುಕ್ತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ನ.30ರಂದು ಮಧ್ಯಾಹ್ನ 3.30ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಚಾಲನೆ ನೀಡಲಾಗುವುದು ಎಂದು ಇಸ್ಕಾನ್ ಕುಡುಪು ಕಟ್ಟೆಯ ಕಾರ್ಯದರ್ಶಿ ಎಚ್.ಜಿ.ಪ್ರೇಮಾ ಭಕ್ತಿದಾಸ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಶಾ ವ್ಯಸನದ ವಿರುದ್ಧ ಜಾಗೃತಿ ಮೂಡಿಸಲು ವಿವಿಧ ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಉದ್ಘಾಟನೆಯ ಬಳಿಕ ‘ಉಮಂಗ್ 3.0: ಮೆಗಾ ಯೂತ್ ಫೆಸ್ಟಿವಲ್ ನಡೆಯಲಿದೆ. ಇಸ್ಕಾನ್ ಹೊಸದಿಲ್ಲಿಯ ಉಪಾಧ್ಯಕ್ಷ ಅಮೋಘ್ ಲೀಲಾದಾಸ್ ಅವರು ಪ್ರವಚನ ನೀಡಲಿದ್ದಾರೆ. ವಿವಿಧ ರಾಜ್ಯಗಳ 1,200ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.
ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಇಸ್ಕಾನ್ ಯೂತ್‌ವಿಂಗ್‌ನ ಕಾರ್ಯಕ್ರಮಗಳನ್ನು ಶ್ಲಾಘಿಸಿದ್ದು ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲು ಎಂಒಯುಗೆ ಸಹಿ ಹಾಕಿದೆ. ಕರ್ನಾಟಕದಲ್ಲಿ ಸುಮಾರು ಶೇ.30ರಷ್ಟು ನಶಾ ವ್ಯಸನ ಪ್ರಕರಣಗಳು ಮಂಗಳೂರು ನಗರದಲ್ಲಿಯೇ ಕಂಡುಬಂದಿದ್ದು ಇಲ್ಲಿಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಎಚ್.ಜಿ.ಪ್ರೇಮಾ ಭಕ್ತಿದಾಸ್ ತಿಳಿಸಿದರು. ಇಸ್ಕಾನ್ ಯುವ ಘಟಕದ ಸದಸ್ಯ ಎಚ್.ಜಿ.ದೇವಧರ್ಮ ದಾಸ್ ಉಪಸ್ಥಿತರಿದ್ದರು.