

ವಿಜಯವಾಣಿ ಸುದ್ದಿಜಾಲ ಮಂಗಳೂರು
ಸೇ ನೋ ಟು ಡ್ರಗ್ಸ್-
ಆಶಯದೊಂದಿಗೆ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಿಂದ ನೆಹರು ಮೈದಾನ ತನಕ ಶುಕ್ರವಾರ ಜರುಗಿದ ವಾಕಥಾನ್ನಲ್ಲಿ ವಿವಿಧ ಕಾಲೇಜುಗಳ ಐದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು.
ಮಂಗಳೂರು ಕ್ಯಾಥೋಲಿಕ್ ಧರ್ಮಪ್ರಾಂತ್ಯ, ಫಾದರ್ ಮುಲ್ಲರ್ ಚಾರಿಟೇಬಲ್ ಟ್ರಸ್ಟ್, ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿ, ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಮತ್ತು ಕ್ಯಾಥೋಲಿಕ್ ಶಿಕ್ಷಣ ಮಂಡಳಿ ಸಹಯೋಗದಲ್ಲಿ ಆಯೋಜಿಸಲಾದ ವಾಕಥಾನ್ನ ಸಮಾರೋಪದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಡಿಸಿಪಿ ಸಿದ್ಧಾರ್ಥ್ ಗೋಯಲ್ ಅವರು, ಕಾರ್ಯಕ್ರಮ ಮೂಲಕ ವಿದ್ಯಾರ್ಥಿ ಸಮೂಹ ದಿಟ್ಟವಾದ ಸಂದೇಶವನ್ನು ಸಮಾಜಕ್ಕೆ ನೀಡಿದೆ ಎಂದರು.
ಡ್ರಗ್ಸ್ ಬಳಸುವ ಯುವಜನರ ಮೇಲೆ ಪ್ರಕರಣ ದಾಖಲಿಸುವುದು ಸುಲಭ. ಆದರೆ ಅದರಿಂದ ಅವರ ಜೀವನ ಹಾಳಾಗುತ್ತದೆ. ಈ ಕುರಿತು ಜಾಗೃತಿ ಅಗತ್ಯ. ಡ್ರಗ್ಸ್ ಅಭ್ಯಾಸ ಯಾವಾಗ ಆರಂಭವಾಗಿ ಚಟವಾಗಿ ಪರಿವರ್ತನೆ ಆಗುತ್ತದೆ ಎಂದು ಹೇಳುವುದು ಕಷ್ಟ. ವಿದ್ಯಾರ್ಥಿಗಳ ಜತೆ, ಕುಟುಂಬ, ಒಟ್ಟು ಸಮಾಜದಲ್ಲಿ ಜಾಗೃತಿ ಮೂಡಿಸುವುದು ಬಹುಮುಖ್ಯ ಎಂದು ಅವರು ಹೇಳಿದರು.
ಬಿಷಪ್ ರೆ.ಫಾ. ಡಾ. ಪೀಟರ್ ಪೌಲ್ ಸಲ್ಡಾನಾ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾದ ವಾಕಥಾನ್ಗೆ ಸಂತ ಅಲೋಶಿಯಸ್ ಮೈದಾನದಲ್ಲಿ ಸಂತ ಅಲೋಶಿಯಸ್ ಡೀಮ್ಡ್ ವಿವಿಯ ರೆಕ್ಟರ್ ರೆ.ಫಾ.ಮೆಲ್ವಿನ್ ಪಿಂಟೊ ಚಾಲನೆ ನೀಡಿದರು.
ಡ್ರಗ್ಸ್ ವಿರುದ್ಧದ ಘೋಷಣೆಯಿಂದ ಕೂಡಿದ ಭಿತ್ತಿಪತ್ರಗಳನ್ನು ಹಿಡಿದು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕಾಲೇಜು ಕ್ಯಾಂಪಸ್ಸಿನಿಂದ ನೆಹರೂ ಮೈದಾನ ತನಕ ಪಾದಯಾತ್ರೆ ನಡೆಸಿ ಅಲ್ಲಿ ಸಮಾವೇಶಗೊಂಡರು.
ಸಮಾರೋಪದಲ್ಲಿ ಅತಿಥಿಗಳಾಗಿ ಡಿಸಿಪಿ ದಿನೇಶ್ ಕುಮಾರ್, ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಡ್ರಗ್ಸ್ ವಿರೋಧಿ ಅಭಿಯಾನದ ಸಂಯೋಜಕ ಲೂವಿ ಜೆ. ಪಿಂಟೋ, ಸೈಂಟ್ ಅಲೋಶಿಯಸ್ ಡೀಮ್ಡ್ ಯುನಿವರ್ಸಿಟಿಯ ಕುಲಪತಿ ರೆ.ಫಾ. ಡಾ. ಪ್ರವೀಣ್ ಮಾರ್ಟಿಸ್, ಡ್ರಗ್ಸ್ ತಡೆ ಸೊಸೈಟಿ ನೋಡೆಲ್ ಅಧಿಕಾರಿ ಡಾ.ರೋಶನ್ ಮೊಂತೆರೋ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಫಾ.ಅಜಿತ್ ಮಿನೇಜಸ್, ಕ್ಯಾಥಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಪ್ರವೀಣ್ ಲಿಯೋ ಲಸ್ರಾದೋ, ಜಾನ್ ಡಿಸಿಲ್ವಾ ಮೊದಲಾದವರು ಉಪಸ್ಥಿತರಿದ್ದರು. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡಾ.ಶಿವಶಂಕರ್ ವಂದಿಸಿದರು.
ಕ್ರೈಸ್ತ ಶಿಕ್ಷಣ ಮಂಡಳಿಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಜತೆಗೆ ಕೆನರಾ, ಶ್ರೀನಿವಾಸ ಯುನಿವರ್ಸಿಟಿ, ಎಸ್ಡಿಎಂ ಕಾಲೇಜು, ಬೆಸೆಂಟ್, ರೋಶನಿ ನಿಲಯ, ಶ್ರೀದೇವಿ ಕಾಲೇಜು, ಶಾರದಾ ಪಿಯುಕಾಲೇಜು, ಮಹಿಳಾ ಸರಕಾರಿ ಕಾಲೇಜು ಬಲ್ಮಠ, ಸೈಂಟ್ ಆಗ್ನೆಸ್ ಕಾಲೇಜು, ಮಿಲಾಗ್ರಿಸ್, ಸೈಂಟ್ ರೇಮಂಡ್ಸ್ ಪದುವಾ ಮೊದಲಾದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ‘ಸೇ ನೋ ಟು ಡ್ರಗ್ಸ್’ ವಾಕಥಾನ್ನಲ್ಲಿ ಜತೆಯಾದರು.