

ಮೈಸೂರು: ಸಮಾಜದಲ್ಲಿ ಕೆಳವರ್ಗದ ಸಮುದಾಯದವರು ವಿದ್ಯಾಭ್ಯಾಸ ಪಡೆದು ಶಿಕ್ಷಿತರಾಗಬೇಕು. ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಮುಖ್ಯವಾಹಿನಿಗೆ ಬರಬೇಕೆಂಬ ನಿಟ್ಟಿನಲ್ಲಿ ಸಾವಿತ್ರಿಬಾಯಿ ಫುಲೆ ನೀಡಿದ ಕೊಡುಗೆ ಸ್ಮರಣೀಯ ಎಂದು ಮಾಜಿ ಮೇಯರ್ ಸುನಂದಾ ಪಾಲನೇತ್ರ ಅಭಿಪ್ರಾಯಪಟ್ಟರು.
ಕೃಷ್ಣರಾಜ ಯುವ ಬಳಗ ವತಿಯಿಂದ ತ್ಯಾಗರಾಜ ರಸ್ತೆಯ ಅಕ್ಕನ ಬಳಗ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಫುಲೆ ಅವರು ದೇಶದ ಮೊದಲ ಶಿಕ್ಷಕಿಯಾಗಿ ಮಹಿಳೆಯರ ಶಿಕ್ಷಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಎನ್.ಎಂ.ನವೀನ್ ಕುಮಾರ್ ಮಾತನಾಡಿ, ಆಧುನಿಕ ಭಾರತದ ಮೊದಲ ಶಿಕ್ಷಕಿ, ಜಾತಿ, ಧರ್ಮ, ವರ್ಗ, ಭೇದಭಾವ ಮಾಡದೆ ಸಮಾನ ಅಕ್ಷರದೂಟ ಉಣಬಡಿಸಿದ ಸಾವಿತ್ರಿಬಾಯಿ ಅವರ ಆದರ್ಶ ಎಲ್ಲರಿಗೂ ಮಾದರಿ. ಶಿಕ್ಷಕಿಯಾಗಿ ಸಾಕಷ್ಟು ಅವಮಾನಗಳನ್ನು ಮೆಟ್ಟಿ ನಿಂತವರು ಸಾವಿತ್ರಿಬಾಯಿ, ಅವರ ಜೀವನಗಾಥೆ ವಿದ್ಯಾರ್ಥಿಗಳಿಗೂ ಸ್ಫೂರ್ತಿ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಸಾವಿತ್ರಿಬಾಯಿ ಫುಲೆ ಅವರು 9ನೇ ವರ್ಷದಲ್ಲೇ ವಿವಾಹವಾದರೂ ಅವರ ಪತಿ ಜ್ಯೋತಿಬಾ ಫುಲೆ ಅವರ ಮಾರ್ಗದರ್ಶನದಲ್ಲಿ ಮನೆಯಲ್ಲಿ ಶಿಕ್ಷಣ ಪಡೆದು ಇಡೀ ದೇಶಕ್ಕೆ ಮೊದಲ ಶಿಕ್ಷಕಿಯಾಗಿ ರೂಪುಗೊಂಡು ಅಕ್ಷರದವ್ವ ಎಂಬ ನಾಮಾಂಕಿತಕ್ಕೆ ಭಾಜನರಾದರು. ನಂತರ ಸುಮಾರು 18 ಶಾಲೆಗಳನ್ನು ತೆರೆದು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸ್ಫೂರ್ತಿಯಾದರು ಎಂದರು.
ಇದೇ ವೇಳೆ ಶಿಕ್ಷಕಿಯರಾದ ಸುಮತಿ, ಎಸ್.ಮಂಜುಳಾ, ಎನ್.ವಿಶಾಲಕ್ಷಮ್ಮ, ಸುಗುಣ, ಕಾವ್ಯಶ್ರೀ, ಸುನಿತಾ, ಶಿವಮ್ಮ, ಸುಮಶ್ರೀ, ನಾಗರತ್ನಾ ಹಾಗೂ ಡಾ.ರಮ್ಯಾ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಸಮಾಜ ಸೇವಕ ಕೆ.ರಘುರಾಮ್ ವಾಜಪೇಯಿ, ವಕೀಲ ಉಮೇಶ್, ಕೃಷ್ಣರಾಜ ಯುವ ಬಳಗದ ಅಧ್ಯಕ್ಷ ನವೀನ್, ಜೈ ಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷ ಚೇತನ್ ಕಾಂತರಾಜು ಇತರರಿದ್ದರು.