

ಮಡಿಕೇರಿ: ಸಮಾಜ ಸುಧಾರಕಿ, ರಾಷ್ಟ್ರದ ಪ್ರಥಮ ಶಿಕ್ಷಕಿಯವರಲ್ಲಿ ಒಬ್ಬರಾದ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯನ್ನು ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಜೊತೆ ಶುಕ್ರವಾರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪ ಯೋಜನಾ ಸಮನ್ವಯ ಅಧಿಕಾರಿ ಎಂ.ಕೃಷ್ಣಪ್ಪ ಮಾತನಾಡಿ, ಮಹಾರಾಷ್ಟ್ರದಲ್ಲಿ ೧೮೩೧ ರ ಜ.೩ ರಂದು ಸಾವಿತ್ರಿ ಬಾಯಿಫುಲೆ ಅವರು ಜನಿಸಿದ್ದು, ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದಾರೆ. ಸಾವಿತ್ರಿ ಬಾಯಿಫುಲೆ ಅವರು ರಾಷ್ಟ್ರದ ಸ್ತ್ರೀವಾದಿ ಚಳುವಳಿಯ ಹರಿಕಾರರಲ್ಲಿ ಒಬ್ಬರಾಗಿದ್ದಾರೆ. ಪತಿ ಜ್ಯೋತಿ ಬಾಫುಲೆ ಅವರ ಜೊತೆಗೂಡಿ ಮಹಾರಾಷ್ಟ್ರದ ಪುಣೆಯಲ್ಲಿ ೧೮೪೮ರಲ್ಲಿ ರಾಷ್ಟ್ರದ ಮೊದಲ ಬಾಲಕಿಯರ ಶಾಲೆ ತೆರೆದಿದ್ದು ವಿಶೇಷವೇ ಸರಿ ಎಂದು ಹೇಳಿದರು.
ಜಾತಿಭೇದ, ಲಿಂಗಾಧಾರಿತ ಅಸಮಾನತೆ ಹೋಗಲಾಡಿಸಲು ಅವರು ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಸಾವಿತ್ರಿಬಾಯಿ ಫುಲೆ ಅವರ ನಿಲುವುಗಳು ಮತ್ತು ಅವರ ಸುಧಾರಣಾ ಕಾರ್ಯಗಳು ಜನಮೆಚ್ಚುಗೆಗೆ ಪಾತ್ರವಾಗಿದ್ದವು ಎಂದು ಕೃಷ್ಣಪ್ಪ ಅವರು ವಿವರಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಸುಶೀಲ ಅವರು ಮಾತನಾಡಿ, ಬಾಲಕಿಯರಿಗಾಗಿ ಮೊದಲ ಶಾಲೆಯನ್ನು ತೆರೆದ ಭಾರತದ ಮೊದಲ ಮಹಿಳಾ ಶಿಕ್ಷಕಿ. ಆಧುನಿಕ ಶಿಕ್ಷಣದ ತಾಯಿ ಎಂದು ಕರೆಯಲ್ಪಡುವ ಸಾವಿತ್ರಿಬಾಯಿಫುಲೆ ಎರಡು ಶತಮಾನಗಳ ಹಿಂದೆ ಸಮುದಾಯಗಳಿಗೆ ಆಧುನಿಕ ಶಿಕ್ಷಣವನ್ನು ಕೊಟ್ಟಂತಹ ಸೇವೆ ಅವಿಸ್ಮರಣಿಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇತರರು ಪಾಲ್ಗೊಂಡು ಸಾವಿತ್ರಿ ಬಾಯಿಫುಲೆ ಅವರ ಜನ್ಮದಿನವನ್ನು ಆಚರಿಸಲಾಯಿತು.