

ಮಂಡ್ಯ: ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಎಂ.ವಿ.ತುಷಾರಮಣಿ ಹೇಳಿದರು.
ನಗರದ ಕ್ರಿಶ್ಚಿಯನ್ ಕಾಲನಿಯಲ್ಲಿರುವ ಗುಡ್‌ಷಫರ್ಡ್ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ತೊಟ್ಟಿಲು ತೂಗುವ ಕೈಗಳು ಜಗತ್ತನ್ನೇ ತೂಗುತ್ತಿವೆ. ಒಂದು ಹೆಣ್ಣು ವಿದ್ಯೆ ಕಲಿತರೆ ಸಮಾಜವನ್ನು ಸುಧಾರಿಸಬಲ್ಲಳು. ಮನೆಯೊಂದಕ್ಕೆ ದೀಪವಾದರೆ ಸಾಲದು, ಸ್ವಾವಲಂಬನೆ ಬದುಕಿಗೂ ಶಕ್ತಿಯಾಗುತ್ತಾಳೆ ಎನ್ನುವುದು ಲೋಕಮಾನ್ಯವಾಗಿದೆ ಎಂದರು.
ಶಿಕ್ಷಣದಿಂದ ನಾಗರಿಕ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ, ಸ್ವಾವಲಂಬನೆ ಜಾಗೃತಗೊಳ್ಳುತ್ತವೆ. ಸಮಾಜಕ್ಕೆ ತುಂಬ ನೆರವಾಗುತ್ತದೆ, ಹೆಣ್ಣು ಶಾಲಾ-ಕಾಲೇಜು ಶಿಕ್ಷಣ ಪಡೆದು ಪುರುಷರಷ್ಟೇ ಸಮಾನತೆಯುಳ್ಳವರು ಎನ್ನುವುದನ್ನು ಸಾವಿತ್ರಿಬಾಯಿ ಫುಲೆ ಸಾಬಿತುಪಡಿಸಿದ್ದಾರೆ ಎಂದು ಶ್ಲಾಘಿಸಿದರು.
ಸಾಡೆ ದೇವಾಯದ ಸಭಾಪಾಲಕ ಆ್ಯಂಡ್ರೊಜಾನ್ ಮಾತನಾಡಿ, ಶಿಕ್ಷಣ ಲಭ್ಯವಾಗದ ಕಾಲದಲ್ಲಿಯೇ ಮಕ್ಕಳು ಮತ್ತು ಮಹಿಳೆಯರಿಗೆ ಪುನರ್‌ವಸತಿ ಕೇಂದ್ರಗಳ ಮೂಲಕ ಶಿಕ್ಷಣ ಕಲಿಸಿ, ಸಾಮಾಜಿಕ ಕಳಕಳಿ ಮೆರೆದ ವಿದ್ಯಾದಾತೆ ಸಾವಿತ್ರಿಭಾಯಿಫುಲೆ ಅವರು ಅವಿಸ್ಮರಣೀಯರು ಎಂದರು.
1851ರಲ್ಲಿ 3 ಶಾಲೆಗಳನ್ನು ತೆರದು 150 ವಿದ್ಯಾರ್ಥಿನಿಯರಿಗೆ ಶಿಕ್ಷಣ ನೀಡಿದು ಕ್ರಾಂತಿಕಾರಿ ಬದಲಾವಣೆಯಾಗಿದೆ. ತ್ಯಾಗಮಯ ಜೀವನವನ್ನು ಸಮಾಜ ಎಂದಿಗೂ ಮರೆಯಲ್ಲ. ಅಂದಿನ ಕಾಲದಲ್ಲಿಯೇ ಬಾಲ್ಯವಿವಾಹ ತಡೆದರು, ವಿಧವಾ ವಿವಾಹಕ್ಕೆ ಪುನರ್‌ವಸತಿ ಕೇಂದ್ರ ತೆರೆದರು, ಸತಿ ಸಹಗಮನ ಪದ್ಧತಿಯನ್ನು ವಿರೋದಿಸಿದರು, ಪತಿಯ ಸಹಕಾರ ಪಡೆದು ಜಾಗೃತಿ ಮೂಡಿಸುವ ಹೋರಾಟವನ್ನು ಮಾಡಿದರು ಎಂದು ಸ್ಮರಿಸಿದರು.
ಗುಡ್‌ಷಫರ್ಡ್ ಶಿಕ್ಷಣ ಟ್ರಸ್ಟ್ ಸದಸ್ಯ ರಿಚರ್ಡ್ ಥಾಮಸ್, ಸಂಸ್ಥಾಪಕ ಥಾಮಸ್ ಬೆಂಜಮಿನ್, ಕಾರ್ಯದರ್ಶಿ ಎ.ಮೋರಿಸ್ ಜೈಕುಮಾರಿ, ಬುದ್ಧ ಭಾರತ ಫೌಂಡೇಷನ್ ಅಧ್ಯಕ್ಷ ಜೆ.ರಾಮಯ್ಯ ಇತರರಿದ್ದರು.