

ಚಿಕ್ಕಮಗಳೂರು: ಸಾವಿತ್ರಿಬಾಯಿ ಫುಲೆ ದೇಶದ ಮೊದಲ ಶಿಕ್ಷಕಿ. ಕೆಳವರ್ಗದ ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಸುವುದರಲ್ಲಿ ಯಶಸ್ವಿಯಾದ ಹೆಮ್ಮೆಯ ಹೋರಾಟಗಾರ್ತಿ ಎಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಹೇಳಿದರು.
ನಗರದ ಬೇಲೂರು ರಸ್ತೆ ಸಮೀಪದ ಶ್ರೀ ಭುವನೇಶ್ವರಿ ಬಾಲಿಕಾ ಪ್ರೌಢಶಾಲೆಯಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಏರ್ಪಡಿಸಿದ್ದ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಪ್ರಯುಕ್ತ ಬುಧವಾರ ಹೆಣ್ಣು ಮಕ್ಕಳಿಗೆ ಸಿಹಿ ವಿತರಿಸಿ ಮಾತನಾಡಿದರು.
ಸಾವಿತ್ರಿಬಾಯಿ ಫುಲೆ 1831 ಜ.3ರಂದು ಮಹಾರಾಷ್ಟ್ರದಲ್ಲಿ ಜನಿಸಿದರು. 19ನೇ ಶತಮಾನದ ಸಮಾಜ ಸುಧಾರಕಿಯಾಗಿ, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದವರು. ಸಾಮಾಜಿಕ ಅನಿಷ್ಟಗಳನ್ನು ನಿರ್ಮೂಲನೆ ಮಾಡಲು ಪಟ್ಟುಬಿಡದೆ ಕೆಲಸ ಮಾಡಿದರು ಎಂದರು.
ದಸಂಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್‌ಕುಮಾರ್ ಮಾತನಾಡಿ, ಸಾವಿತ್ರಿಬಾಯಿ ಫುಲೆ ರೈತರ ಪರವಾಗಿಯೂ ಹೋರಾಡಿದ್ದರು. ಕವನದ ಮೂಲಕ ತಾರತಮ್ಯದ ವಿರುದ್ಧ ಧ್ವನಿ ಎತ್ತಿದರು. ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯದ ಅರಿವು ಮೂಡಿಸಿದ್ದರು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಸಂತೋಷ್ ಮಾತನಾಡಿ, ಸಾವಿತ್ರಿಬಾಯಿ ಫುಲೆ ಮನೆಯಲ್ಲಿ ಪತಿಯಿಂದ ಶಿಕ್ಷಣ ಪಡೆದರು. ಉನ್ನತ ಶಿಕ್ಷಣ ಪಡೆದ ಹಿನ್ನೆಲೆಯಲ್ಲಿ ಅವರು ದೇಶದ ಮೊದಲ ಶಿಕ್ಷಕಿಯಾಗಿ ಹೊರಹೊಮ್ಮಿದರು ಎಂದು ತಿಳಿಸಿದರು.
ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ದಸಂಸ ಮುಖಂಡರಾದ ಚಂದ್ರಶೇಖರ್, ಚಂದ್ರು, ನಿವೃತ್ತ ಪೊಲೀಸ್ ಅಧಿಕಾರಿ ವಿರೂಪಾಕ್ಷಪ್ಪ, ಕಾಲೇಜಿನ ಪ್ರಾಧ್ಯಾಪಕಿ ರೇಖಾ ಇದ್ದರು.