ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ

3-pnp 2
ಪಾಂಡವಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನವನ್ನು ಆಚರಿಸಿದರು. ಬಳೇಅತ್ತಿಗುಪ್ಪೆ ಬಿ.ಕೆ.ರವಿ, ಬಸ್ತಿಹಳ್ಳಿ ಯೋಗೇಶ್, ಶಂಕನಹಳ್ಳಿ ವರದರಾಜು ಇತರರು ಇದ್ದರು.
Published on

ಪಾಂಡವಪುರ: ಅಕ್ಷರ ಮಾತೆ, ಭಾರತದ ಮೊಟ್ಟ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ 193ನೇ ಜನ್ಮದಿನವನ್ನು ದಸಂಸ ವತಿಯಿಂದ ಬುಧವಾರ ಆಚರಿಸಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ದಸಂಸ ಮೈಸೂರು ವಿಭಾಗೀಯ ಸಂಚಾಲಕ ಡಿ.ಕೆ.ಅಂಕಯ್ಯ ಮಾತನಾಡಿ, ಸಾವಿತ್ರಿಬಾಯಿ ಫುಲೆ ಭಾರತದ ಮೊದಲ ಮಹಿಳಾ ಶಿಕ್ಷಕಿಯಾಗಿ, ವಿಧವೆಯರಿಗೆ ಶಿಕ್ಷಣ ಕಲಿಸುವ ಮೂಲಕ ಹೊಸ ಸಂಸ್ಕೃತಿಗೆ ನಾಂದಿ ಹಾಕಿದರು. ಅವರು ಸಮಕಾಲೀನ ಭಾರತದಲ್ಲಿ ಪ್ರವರ್ತಕ ಮಹಿಳೆಯಾಗಿದ್ದರು. ವಿಧವೆಯರಿಗೆ ಮದುವೆ ಮಾಡುವ ಪ್ರಯತ್ನವನ್ನೂ ಮಾಡಿದ ಅವರು, ಸಮಾಜದ ಗಮನಾರ್ಹ ಬದಲಾವಣೆಗೆ ಪ್ರಯತ್ನ್ನಿಸಿದ್ದರು ಎಂದು ತಿಳಿಸಿದರು.

ವಿಧವೆಯರನ್ನು ಮರುಮದುವೆ ಮಾಡುವ ನಿರ್ಧಾರವು ಅವರ ಬುದ್ಧಿವಂತ ಕ್ರಮಗಳಲ್ಲಿ ಒಂದಾಗಿದೆ. ಅವರು ಮಹಿಳಾ ಶಿಕ್ಷಣವನ್ನು ಉತ್ತೇಜಿಸಲು ಕೆಲಸ ಮಾಡಿದರು. ಸಾವಿತ್ರಿಬಾಯಿ ಫುಲೆ ಭಾರತದ ಪ್ರಸಿದ್ಧ ಸಮಾಜ ಸುಧಾರಕಿ, ಶಿಕ್ಷಣ ತಜ್ಞೆಯಾಗಿದ್ದರು. ಅವರು ಮಹಿಳಾ ಶಿಕ್ಷಣ ಮತ್ತು ಸಬಲೀಕರಣದ ಮೇಲೆ ಮಹತ್ತರವಾದ ಪ್ರಭಾವ ಬೀರಿದ್ದರು. ಅವರ ಕಾಲದ ಕೆಲವೇ ಅಕ್ಷರಸ್ಥ ಮಹಿಳೆಯರಲ್ಲಿ ಒಬ್ಬರಾದ ಸಾವಿತ್ರಿಬಾಯಿ ಅವರು ಪತಿ ಜ್ಯೋತಿರಾವ್ ಫುಲೆ ಅವರೊಂದಿಗೆ ಪುಣೆಯ ಭಿಡೆ ವಾಡಾದಲ್ಲಿ ಮೊದಲ ಬಾಲಕಿಯರ ಶಾಲೆಯನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.

ಬಾಲ ವಿಧವೆಯರಿಗೆ ಶಿಕ್ಷಣ ನೀಡಲು ಮತ್ತು ವಿಮೋಚನೆಗೊಳಿಸಲು ಶ್ರಮಿಸಿದ್ದರು. ವಿಧವಾ ಪುನರ್ವಿವಾಹವನ್ನು ಬೆಂಬಲಿಸಿದರು. ಬಾಲ್ಯ ವಿವಾಹದ ವಿರುದ್ಧ ಅಭಿಯಾನವನ್ನು ನಡೆಸಿದ್ದ ಅವರು, ದಲಿತ ಮಾಂಗ್ ಜಾತಿಯ ಐಕಾನ್ ಎಂದು ಗುರುತಿಸಲ್ಪಟ್ಟಿದ್ದಾರೆ. ಬಿ.ಆರ್.ಅಂಬೇಡ್ಕರ್ ಮತ್ತು ಅಣ್ಣಾಭೌ ಸಾಠೆ ಅವರೊಂದಿಗೆ ಮಹಾರಾಷ್ಟ್ರದ ಸಮಾಜ ಸುಧಾರಣಾ ಚಳವಳಿಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು ಎಂದರು.

ಸಮಿತಿಯ ತಾಲೂಕು ಸಂಚಾಲಕ ಬಳೇಅತ್ತಿಗುಪ್ಪೆ ಬಿ.ಕೆ.ರವಿ, ತಾಲೂಕು ಸಂಘಟನಾ ಸಂಚಾಲಕ ಬಸ್ತಿಹಳ್ಳಿ ಯೋಗೇಶ್, ಶಂಕನಹಳ್ಳಿ ವರದರಾಜು, ಡಾಮಡಹಳ್ಳಿ ಜಯರಾಂ, ಹೋಬಳಿ ಸಂಚಾಲಕ ಶಂಕನಹಳ್ಳಿ ಸತೀಶ್, ಹಿರೇಮರಳಿ ರಾಮಚಂದ್ರು, ಹೊಸಕನ್ನಂಬಾಡಿ ನಿಂಗಯ್ಯ, ಎಲೆಕೆರೆ ಮಹದೇವು, ನಾಗಮಂಗಲ ಮಾಜಿ ತಾಲೂಕು ಸಂಚಾಲಕ ಪುಟ್ಟಸ್ವಾಮಿ ನಾಗಮಂಗಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net