

ಶೃಂಗೇರಿ: ಸಾಂಸ್ಕೃತಿಕ ಮೌಲ್ಯಗಳಿಗೆ ಭಕ್ತಿ ಹಾಗೂ ಶಾಸ್ತ್ರೀಯ ಸಂಗೀತ ನೀಡಿದ ಕೊಡುಗೆ ಅನನ್ಯ ಎಂದು ವಿದುಷಿ ಸಾವಿತ್ರಿ ಪ್ರಭಾಕರ್ ತಿಳಿಸಿದರು.
ಶ್ರೀಮಠದ ಪ್ರವಚನ ಮಂದಿರದಲ್ಲಿ ಶ್ರೀ ಶಾರದಾ ಶಾಸ್ತ್ರೀಯ ಸಂಗೀತ ಸಭಾ ಹಾಗೂ ಶ್ರೀ ಭಾರತೀ ಸಂಗೀತ ಪಾಠಶಾಲೆ ಆಶ್ರಯದಲ್ಲಿ ಆಯೋಜಿಸಿದ್ದ 26ನೇ ತ್ಯಾಗರಾಜ ಸ್ವಾಮಿಗಳ ಆರಾಧನೆ ಹಾಗೂ ಸಂಗೀತೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಗೀತ ಹೃದಯದ ಭಾಷೆ. ಹಾಡುಗಾರಿಕೆಗೆ ಪರಿಸರದಲ್ಲಿ ಸುಸಂಸ್ಕೃತ ವಾತಾವರಣ ಉಂಟುಮಾಡುವ ಅದ್ಭುತ ಶಕ್ತಿ ಇದೆ. ಆಧ್ಯಾತ್ಮಿಕ ಮೌಲ್ಯಗಳನ್ನು ಸಮುದಾಯದಲ್ಲಿ ಅನಾವರಣಗೊಳಿಸುವಲ್ಲಿ ಸಂಗೀತ ಕ್ಷೇತ್ರ ನೀಡಿದ ಕೊಡುಗೆ ಅಪಾರ. ಶ್ರೀ ತ್ಯಾಗರಾಜರು, ಪುರಂದರ ದಾಸರು, ಕನಕದಾಸರು ಸಂಗೀತದ ಮೂಲಕ ಜನಸಾಮಾನ್ಯರಲ್ಲಿ ಭಕ್ತಿಯ ಅಭಿವ್ಯಕ್ತಿ ಬಿತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀ ಭಾರತೀ ಸಂಗೀತ ಪಾಠಶಾಲೆ ಹಲವು ವರ್ಷಗಳಿಂದ ಮಕ್ಕಳಿಗೆ ಸಂಗೀತ ಕಲಿಕೆ ಮೂಲಕ ಆಧ್ಯಾತ್ಮಿಕ ಶಿಕ್ಷಣ ನೀಡುವಲ್ಲಿ ಯಶಸ್ಸು ಕಂಡಿದೆ ಎಂದರು.
ಖ್ಯಾತ ಸಂಗೀತಗಾರರಾದ ರಾಮ್ುಮಾರ್, ವಿದ್ವಾನ್ ಆರ್.ವಿ.ರವಿ, ವಿದುಷಿ ಬಾಲಮಣಿ ಈಶ್ವರ, ಅಮೃತ ಮುರಳಿ ಮತ್ತಿತರರು ಭಾಗವಹಿಸಿದ್ದರು. ಮಂಗಳೂರಿನ ವಯೋಲಿನ್ ವಾದಕ ವಿಶ್ವಾಸ್ ಕೃಷ್ಣಗೆ ‘ಯುವ ಪ್ರತಿಭಾ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆಗಳಲ್ಲಿ ವಿಜೇತರಾದ, ಸಂಗೀತ ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಸಾಧನೆ ಮಾಡಿದ ಭಾರತೀ ಸಂಗೀತ ಪಾಠಶಾಲೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.