

ಚಿಕ್ಕಮಗಳೂರು: ತಾಲೂಕಿನ ಮುಗುಳುವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನವನ್ನು ಸದಸ್ಯರುಗಳ ಸಹಕಾರದಿಂದ ಬಿಜೆಪಿ ಬೆಂಬಲಿತ ಪರಿಶಿಷ್ಟ ಜಾತಿ ಮಹಿಳೆ ಎಂ.ಪಿ.ಸವಿತಾಗೆ ಅವಕಾಶ ಕಲ್ಪಿಸಿ ಆಯ್ಕೆಗೊಳಿಸಿದ ಅಪರೂಪದ ಪ್ರಸಂಗ ಶುಕ್ರವಾರ ನಡೆಯಿತು.
ಗ್ರಾಪಂ ಸಭಾಂಗಣದಲ್ಲಿ ಅಧ್ಯಕ್ಷ ಸ್ಥಾನವನ್ನು ಸರ್ವ ಸದಸ್ಯರ ಸಹಕಾರದಿಂದ ಸಾಮಾನ್ಯ ಮಹಿಳೆ ಬದಲಾಗಿ ಎಸ್ಸಿ ಮಹಿಳೆಯನ್ನು ಆಯ್ಕೆಗೊಳಿಸಲಾಯುತು. ಅಧ್ಯಕ್ಷ ಸ್ಥಾನಕ್ಕೆ ಸವಿತಾ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಆರ್.ಶಿವಕುಮಾರ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಅಭಿನಂದನೆ ಸಲ್ಲಿಸಿ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ದೀಪಕ್‌ದೊಡ್ಡಯ್ಯ, ಆದರ್ಶ ಗ್ರಾಮವೆಂದೇ ಪ್ರಸಿದ್ಧಿಗೊಂಡಿರುವ ಮುಗುಳುವಳ್ಳಿ ಅಧಿಕಾರಕ್ಕಾಗಿ ಆಸೆಪಡದೇ ಸಮಾನ ಮನಸ್ಥಿತಿ ಹೊಂದಿರುವ ಕಾರಣ ಸಾಮಾನ್ಯ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಬಿಟ್ಟುಕೊಟ್ಟಿರುವುದು ಉತ್ತಮ ಉದಾಹರಣೆಯಾಗಿದೆ ಎಂದರು.
ಕೆಲವು ಗ್ರಾಪಂಗಳಲ್ಲಿ ಮೀಸಲಾತಿ ಯಾವುದೇ ಬಂದರೂ ಅಧಿಕಾರ ಸ್ಥಾನ ಅಲಂಕರಿಸಲು ಹಲವಾರು ಕಸರತ್ತುಗಳು ನಡೆಯುತ್ತವೆ. ಆದರೆ ಮುಗುಳುವಳ್ಳಿ ಗ್ರಾಪಂ ಇವುಗಳನ್ನು ಮೀರಿ ನಿಂತಿರುವುದು ಹೆಮ್ಮೆಯ ಸಂಗತಿ. ಹೀಗಾಗಿ ಸಿಕ್ಕಂತಹ ಅವಕಾಶದಲ್ಲಿ ನೂತನ ಅಧ್ಯಕ್ಷರು ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಜನ ಮನ್ನಣೆ ಗಳಿಸಬೇಕು ಎಂದರು.
ಗ್ರಾಮ ಪಂಚಾಯಿತಿಗಳು ಪ್ರಜಾಪ್ರಭುತ್ವದ ಬೇರುಗಳಿದ್ದಂತೆ. ಗ್ರಾಮದ ಮೂಲಭೂತ ಸೌಕರ್ಯಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು. ಎಂಎಲ್‌ಸಿ ಅಥವಾ ಎಂಪಿಗಳು ಕ್ಷೇತ್ರದ ಇತರೆ ಕೆಲಸದಲ್ಲಿ ತೊಡಗಿದ ವೇಳೆಯಲ್ಲಿ ಸ್ಥಳೀಯವಾಗಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಪ್ರಜಾಪ್ರಭುತ್ವದಲ್ಲಿ ಗ್ರಾಪಂ ಆಡಳಿತ ಜಾರಿಗೆ ತಂದಿದೆ ಎಂದು ಹೇಳಿದರು.
ನೂತನ ಅಧ್ಯಕ್ಷೆ ಎಂ.ಪಿ.ಸವಿತಾ ಮಾತನಾಡಿ, ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸದಸ್ಯರುಗಳ ಸಹಕಾರದೊಂದಿಗೆ ಗ್ರಾಮಸ್ಥರಿಗೆÀ ಪೂರಕವಾಗಿ ಕಾರ್ಯನಿರ್ವಹಿಸುವೆ ಎಂದರು.
ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನೇಶ್‌ಕುಮಾರ್ ಮಾತನಾಡಿ, ಗಾಂಧಿ ಗ್ರಾಮವೆಂದು ಪುರಸ್ಕಾರ ಪಡೆದಿರುವ ಮುಗುಳುವಳ್ಳಿ ಈ ಹಿಂದೆ ಅಧಿಕಾರ ಹಂಚಿಕೆಯಲ್ಲೂ ವಿಶಿಷ್ಟವಾಗಿ ಸರ್ವರಿಗೆ ಸಮಾನ ಅವಕಾಶ ಕಲ್ಪಿಸಿಕೊಟ್ಟಿದೆ. ಹಿಂದಿನ ಶಾಸಕರು ಹಾಗೂ ಹಾಲಿ ಉಪಸಭಾಪತಿಗಳ ಸಹಕಾರದಿಂದ ಗ್ರಾಪಂಗೆ ೭ ಕೋಟಿಗೂ ಹೆಚ್ಚು ಅನುದಾನ ಒದಗಿಸಿ ಅಭಿವೃಧ್ದಿಗೆ ಶ್ರಮಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಎಂ.ಡಿ.ಉಮೇಶ್, ಮಾಜಿ ಅಧ್ಯಕ್ಷ ರಘುನಂದನ್, ಸದಸ್ಯರಾದ ಟಿ.ಮಲ್ಲೇಶಪ್ಪ, ಬಿ.ಎಸ್.ಶೇಖರ್, ವನಿತ, ಎಂ.ಟಿ.ಭಾಗ್ಯ, ಶೃತಿ, ಎಸ್.ಕಲಾವತಿ, ಬಿಜೆಪಿ ಓಬಿಸಿ ಪ್ರಧಾನ ಕಾರ್ಯದರ್ಶಿ ರಾಜುಮಣೇನಹಳ್ಳಿ, ಮಹಾಶಕ್ತಿ ಕೇಂದ್ರದ ಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಧರ್ಮಯ್ಯ, ಪಿಡಿಓ ಜಿ.ಪಿ.ಸುಮಾ ಮತ್ತಿತರರಿದ್ದರು.