ಸವಿತಾ ಸಮಾಜ ಸೌಹಾರ್ದ ಸಹಕಾರಿಯಿಂದ ಬಡ್ಡಿ ರಹಿತ ಸಾಲ

saloon new
Published on

ಉಡುಪಿ: ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಲಾಕ್‌ಡೌನ್ ತೆರವಾದ ಬಳಿಕ ಆರ್ಥಿಕತೆ ಪುನಃಶ್ಚೇತನಗೊಳಿಸಲು, ಸದಸ್ಯರಿಗೆ ಸೆಲೂನ್ ಪ್ರಾರಂಭಿಸಲು ಜಾಮೀನು ರಹಿತವಾಗಿ 6 ತಿಂಗಳ ಅವಧಿಗೆ 10 ಸಾವಿರ ರೂ. ಬಡ್ಡಿ ರಹಿತ ಸಾಲ ಸೌಲಭ್ಯ ನೀಡಲಾಗಿದೆ ಎಂದು ಅಧ್ಯಕ್ಷ ನವೀನ್‌ಚಂದ್ರ ಭಂಡಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

60 ವರ್ಷದ ಮೇಲ್ಪಟ್ಟ ಕ್ಷೌರಿಕ ವೃತ್ತಿನಿರತ 45 ಮಂದಿ ಸಹಕಾರಿ ಸದಸ್ಯರಿಗೆ ಸತತ ಮೂರು ವರ್ಷದಿಂದ ಸಹಕಾರಿ ಲಾಭಾಂಶದಲ್ಲಿ ಒಟ್ಟು 3 ಲಕ್ಷ ರೂ. ಹಿರಿಯ ನಾಗರಿಕರ ವೇತನ ವಿತರಿಸಲಾಗಿದೆ. ಸವಿತಾ ಸಮಾಜದ ಬಡ ಹೆಣ್ಣು ಮಕ್ಕಳ ಮದುವೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ, ಸವಿತಾ ಆರೋಗ್ಯ ಶ್ರೀ ಯೋಜನೆಯಡಿ ಸವಿತಾ ಸೆಲೂನ್ ಸಾಮಗ್ರಿ ಮಳಿಗೆಯಲ್ಲಿ ಕ್ಷೌರಿಕ ವೃತ್ತಿನಿರತ ಸದಸ್ಯರಿಗೆ ಸಹಕಾರಿ ಲಾಭಂಶದಲ್ಲಿ 5 ಸಾವಿರ ರೂ. ನಿಂದ 25 ಸಾವಿರ ರೂ. ತನಕ ಚಿಕಿತ್ಸೆಗಾಗಿ ಸಹಾಯಧನ ನೀಡಲು ಯೋಜನೆ ರೂಪಿಸಲಾಗಿದೆ ಎಂದರು.

ಸೊಸೈಟಿ ಮುಖ್ಯ ಕಾರ್ಯಹಣಾಧಿಕಾರಿ ಮಾಲತಿ ಅಶೋಕ್ ಭಂಡಾರಿ, ಉಪಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ, ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ತಾಲೂಕು ಸವಿತಾ ಸಮಾಜದ ಅಧ್ಯಕ್ಷ ರಾಜು ಸಿ. ಭಂಡಾರಿ ಕಿನ್ನಿಮುಲ್ಕಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net