

ಮಡಿಕೇರಿ: ಸರ್ಕಾರದ ಸವಲತ್ತು ಪಡೆಯಲು ಸವಿತಾ ಸಮಾಜದವರು ಒಗ್ಗಟ್ಟಿನ ಪ್ರಯತ್ನ ನಡೆಸಬೇಕೆಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನೀಲ್ ಸುಬ್ರಮಣಿ ಕರೆ ನೀಡಿದರು.
ಮಡಿಕೇರಿ ತಾಲೂಕು ಸವಿತಾ ಸಮಾಜದಿಂದ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕ್ರೀಡೋತ್ಸವ ಉದ್ಘಾಟನಾ ಕಾರ್ಯಕ್ರಮ ಸೋಮವಾರ ಉದ್ಘಾಟಿಸಿ ಮಾತನಾಡಿದರು. ಸವಿತಾ ಸಮಾಜದವರು ಜಿಲ್ಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದು, ಸರ್ಕಾರದ ಸವಲತ್ತು ಸಿಗಲು ಸಂಘಟಿತ ಪ್ರಯತ್ನ ನಡೆಸಬೇಕೆಂದು ಸಲಹೆ ನೀಡಿದರು.
ವಿದೇಶದಲ್ಲಿ ನೆಲೆಸಿದ್ದವರು ಕೋವಿಡ್ ಹಿನ್ನೆಲೆಯಲ್ಲಿ ಊರಿಗೆ ಮರಳಿದ್ದು, ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಯಾವ ಕಾರಣಕ್ಕೂ ಯಾರೂ ಮೂಲ ಕಸುಬು ಬಿಡಬಾರದೆಂದು ಮನವಿ ಮಾಡಿದರು. ಸವಿತಾ ಸಮಾಜದ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ನಿವೇಶನಕ್ಕೆ ಡಿಸಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಅಗತ್ಯ ಸಹಕಾರ ನೀಡುವುದಾಗಿ ಸುನೀಲ್ ಸುಬ್ರಮಣಿ ಭರವಸೆ ನೀಡಿದರು.
ಸವಿತಾ ಸಮಾಜದವರು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಮೂಲಕ ತಮ್ಮ ಬೇಡಿಕೆ ಈಡೇರುವಂತೆ ಮಾಡಬೇಕೆಂದು ಮುಖ್ಯಅತಿಥಿ ಯಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಕರೆ ನೀಡಿದರು. ಸವಿತಾ ಸಮಾಜದ ಕಟ್ಟಡ ನಿರ್ಮಾಣಕ್ಕೆ ನಿವೇಶನ ಹಾಗೂ ಆರ್ಥಿಕ ನೆರವು ಒದಗಿಸಲು ಸರ್ಕಾರ ಮಟ್ಟದಲ್ಲಿ ಸಹಕರಿಸುವಂತೆ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನೀಲ್ ಸುಬ್ರಮಣಿಗೆ ಮನವಿ ಮಾಡಿದರು.
ಸಮಾಜದ ಸಂಘಟನೆಗೆ ಬಲ ತುಂಬಲು ಕ್ರೀಡೋತ್ಸವ ಆಯೋಜಿಸಲಾಗಿದೆ. ಸಮಾಜದ ಕಾರ್ಯ ಚಟುವಟಿಕೆಯಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಅಧ್ಯಕ್ಷತೆ ವಹಿಸಿ ಮಾತನಾಡಿದ ಸವಿತಾ ಸಮಾಜ ಜಿಲ್ಲಾಧ್ಯಕ್ಷ ಕೆ.ಎಸ್. ದೊರೇಶ್ ಹೇಳಿದರು.
ಮುಖ್ಯಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಪುತ್ರ ವಿಕಾಸ್ ಅಚ್ಚಯ್ಯ, ಮಡಿಕೇರಿ ತಾಲೂಕು ಸವಿತಾ ಸಮಾಜ ಮಹಿಳಾ ಘಟಕ ಸುಂದರಮ್ಮ, ಮಡಿಕೇರಿ ತಾಲೂಕು ಸವಿತಾ ಸಮಾಜ ಅಧ್ಯಕ್ಷ ಎಂ.ಟಿ. ಮಧು, ಕ್ರೀಡಾ ಅಧ್ಯಕ್ಷ ಮಧು ಚೆಟ್ಟಿಮಾನಿ, ಸೋಮವಾರಪೇಟೆ ತಾಲೂಕು ಸವಿತಾ ಸಮಾಜ ಅಧ್ಯಕ್ಷ ಶಿವಣ್ಣ ಇದ್ದರು. ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಬ್ಯಾಟ್ ಮಾಡುವುದರ ಮೂಲಕ ಹಾಗೂ ವಿಧಾನ ಪರಿಷತ್ ಸದಸ್ಯ ಶಾಂತೆಯಂಡ ವೀಣಾ ಅಚ್ಚಯ್ಯ ಪುತ್ರ ವಿಕಾಸ್ ಅಚ್ಚಯ್ಯ ಬೌಲ್ ಮಾಡುವುದರ ಮೂಲಕ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು.
======