

ಮಂಡ್ಯ: ಸವಿತಾ ಮಹರ್ಷಿ ಸಮಾಜದ ಶ್ರೇಷ್ಟತೆಗೆ ಶ್ರಮಿಸಿದ ಮಹಾನ್ ವ್ಯಕ್ತಿ. ಇವರು ರಥಸಪ್ತಮಿಯ ದಿನ ಶಿವನ ಬಲಗಣ್ಣಿನಿಂದ ಜನ್ಮ ತಾಳಿದ್ದರಿಂದ ಪ್ರತಿವರ್ಷ ಅದೇ ದಿನ ಜಯಂತಿ ಆಚರಿಸಲಾಗುತ್ತದೆ ಎಂದು ಸಾಹಿತಿ ಡಾ.ಜಯಪ್ಪ ಹೊನ್ನಾಳಿ ಹೇಳಿದರು.
ನಗರದ ಕರ್ನಾಟಕ ಸಂಘದ ಕೆವಿಎಸ್ ಶತಮಾನೋತ್ಸವ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತ್ಯುತ್ಸವದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಮಹರ್ಷಿ ಅವರು ಸವಿತಾ ಸಮಾಜದ ಮೂಲಪುರುಷ. ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದವರ ಉದ್ಧಾರಕ್ಕಾಗಿ ಶ್ರಮಿಸಿದ ಮಹಾನ್ ಸಾಧಕ. ಇವರು ಕ್ಷತ್ರಿಯ, ವೈದ್ಯ, ಕ್ಷೌರಿಕ, ಸಂಗೀತ ವಾದ್ಯ ನುಡಿಸುವವರು ಹಾಗೂ ಆಯುಷ್ಕರ್ಮ ಮಾಡುವ ಕಾಯಕ ಶೂರರಾಗಿದ್ದರು. 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣ ಅವರಿಗೆ ಆಶ್ರಯ ನೀಡಿದ ಸವಿತಾ ಸಮಾಜದ ದೊರೆ ಬಿಜ್ಜಳ ಎಂಬುದು ಹೆಮ್ಮೆಯ ಸಂಗತಿ ಎಂದರು.
ರಾಷ್ಟ್ರಕೂಟ, ವಿಜಯನಗರ, ಕಲ್ಯಾಣ ಚಾಲುಕ್ಯರ ಶಾಸನಗಳಲ್ಲಿ ಸವಿತಾ ಸಮಾಜದ ಬಗ್ಗೆ ಉಲ್ಲೇಖವಿದೆ. ಅನೇಕ ಶಾಸನಗಳ ಮೇಲೆ ಸವಿತಾ ಸಮಾಜದ ಸಾಧನೆಗಳಾದ ಕತ್ತಿ, ಕನ್ನಡಿ ಹಾಗೂ ಕತ್ತರಿಗಳನ್ನು ಕೆತ್ತಲಾಗಿದೆ. ಅನೇಕ ವರ್ಷಗಳಿಂದ ಸುದೀರ್ಘ ಇತಿಹಾಸವನ್ನು ಹೊಂದಿದ ಸವಿತಾ ಸಮಾಜ ತನ್ನ ಸೇವ ಕಾರ್ಯದಿಂದಲೇ ಹೆಸರುವಾಸಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಉದಯ್‌ಕುಮಾರ್, ಸವಿತಾ ಮಹರ್ಷಿ ಸಮಾಜಮುಖಿಯಾಗಿ ಬೆಳೆದು ದಾರಿದೀಪವಾಗಿದ್ದಾರೆ. ಇಂತಹ ಮಹಾತ್ಮರ ಜಯಂತಿಗಳನ್ನು ಆಚರಿಸುವ ಮೂಲಕ ಸರ್ಕಾರ ಇವರ ಆದರ್ಶಗಳ ಹಾದಿಯಲ್ಲಿ ನಡೆಯಲು ನಮಗೆ ಬೆಳಕು ತೋರಿಸಿದೆ. ಜನಸಾಮಾನ್ಯರು ಸವಿತಾ ಮಹರ್ಷಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕುಲಭಾಂದವರ ವೇದಿಕೆ ರಾಜ್ಯಾಧ್ಯಕ್ಷ ಲೋಕೇಶ್, ಸವಿತಾ ಸಮಾಜದ ಅಧ್ಯಕ್ಷ ಜಿಲ್ಲಾಧ್ಯಕ್ಷ ಪ್ರತಾಪ್, ಹಿರಿಯ ಮುಖಂಡ ಎಂ.ಎಸ್.ರಾಜಣ್ಣ, ತಾಲೂಕು ಅಧ್ಯಕ್ಷ ಕೊತ್ತತ್ತಿ ನಾಗರಾಜ್, ನಗರಾಧ್ಯಕ್ಷ ಸೋಮಣ್ಣ, ಮಂಗಳವಾದ್ಯ ಕಲಾವಿದರ ಸಂಘದ ಅಧ್ಯಕ್ಷ ಸಂತೋಷ್, ಸವಿತಾ ಸ್ನೇಹ ಬಳಗದ ಅಧ್ಯಕ್ಷ ಮೂರ್ತಿ, ರಾಮಲಿಂಗಯ್ಯ, ನಂದೀಶ್, ಕೆಂಪರಾಜು ಇತರರಿದ್ದರು.