

ಮಂಗಳೂರು: ನಮ್ಮ ದೇಶ ಹಲವು ಸಂತರು ಹಾಗೂ ದಾರ್ಶನಿಕರ ಮಾರ್ಗದರ್ಶನದಿಂದ ಉದಾತ್ತ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಂಡಿದೆ. ಸಂತರು, ಸಾಧಕರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಸಮಾಜದ ಏಳಿಗೆ ಸಾಧ್ಯ ಎಂದು ಮಂಗಳೂರು ಶಾಸಕ ಡಿ ವೇದವ್ಯಾಸ್ ಕಾಮತ್ ಹೇಳಿದರು.
ಮಂಗಳವಾರ ಸರ್ಕಾರಿ ನೌಕರರ ಸಂಘದ ನಂದಿನಿ ಸಭಾಭವನದಲ್ಲಿ ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ದ.ಕ ಜಿಲ್ಲಾ ಸವಿತಾ ಸಮಾಜ ಇವರ ಸಹಕಾರದೊಂದಿಗೆ ನಡೆದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುರಾಣ ಗ್ರಂಥಗಳ ಪ್ರಕಾರ ಸವಿತಾ ಮಹರ್ಷಿ ದೇವ ದೇವತೆಗಳ ಆಯುಷ್ಕರ್ಮ ಮಾಡುತ್ತಿದ್ದರೆಂದು ಕಾಶಿ ಕ್ಷೇತ್ರದಲ್ಲಿ ದೊರೆತ ಮಹಾಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಶಿವನ ದೃಷ್ಟಿಯಲ್ಲಿ ಜನ್ಮ ತಾಳಿದ ಸವಿತಾ ಮಹರ್ಷಿ ಬ್ರಹ್ಮಜ್ಞಾನ ಹೊಂದಿದವರಾಗಿದ್ದು, ಚತುರ್ವೇದಗಳಲ್ಲಿ ಒಂದಾದ ಸಾಮವೇದವನ್ನು ಬರೆದವರು. ಸವಿತಾ ಮಹರ್ಷಿಗಳು ತಮ್ಮ ಕಾಲಘಟ್ಟದಲ್ಲಿ ಸಮಾಜದ ತಳಮಟ್ಟದ ಹಾಗೂ ಶೋಷಿತ ವರ್ಗದ ಜನರ ಪರ ಕೆಲಸ ಮಾಡಿದವರು. ಇಂಥ ಮಹಾನ್ ಸಾಧಕ, ದಾರ್ಶನಿಕರ ತತ್ವಾದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳುವುದೇ ನಾವು ಅವರಿಗೆ ನೀಡುವ ಗೌರವ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಆನಂದ್ ಭಂಡಾರಿ ಹೊಸಬೆಟ್ಟು, ಸವಿತಾ ಸಮಾಜ ಅತ್ಯಂತ ಕಡಿಮೆ ಜನರನ್ನು ಹೊಂದಿದೆ. ಈ ಸಮಾಜದವರು ಒಂದಾದರೆ ಮಾತ್ರ ಸವಿತಾ ಸಮಾಜದ ಏಳಿಗೆಯಾಗುತ್ತದೆ. ಆದ್ದರಿಂದ ಸವಿತಾ ಸಮಾಜದವರು ಪರಸ್ಪರ ಒಗ್ಗೂಡಬೇಕು. ಸವಿತಾ ಸಮಾಜದ ಏಳಿಗೆಗೋಸ್ಕರ ಸಹಕಾರ ನೀಡಬೇಕು ಎಂದರು.
ಲೇಖಕ ಟಿ.ಎ.ಎನ್ ಖಂಡಿಗೆ ಸವಿತಾ ಮಹರ್ಷಿ ಜಯಂತಿ ಹಿನ್ನೆಲೆಯಲ್ಲಿ ಉಪನ್ಯಾಸ ನೀಡಿದರು.
ಮಂಗಳೂರು ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಸುರೇಶ್ ಭಂಡಾರಿ, ಮಾಜಿ ಮೇಯರ್ ದಿವಾಕರ್ ಪಂಡಿತ್, ವಸಂತ್ ಎಂ ಬೆಳ್ಳೂರು, ಎಡಿಸಿ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್.ಜಿ ಸ್ವಾಗತಿಸಿ, ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.
---------------
ಸವಿತಾ ಸಮಾಜ ಸದೃಢಗೊಳ್ಳಬೇಕು. ಆದ್ದರಿಂದ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಸವಿತಾ ಸಮಾಜಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಪ್ರತಿಯೊಂದು ಸಮುದಾಯವೂ ಕೂಡ ಅವರದ್ದೇ ಆದ ಜ್ಞಾನ ಹೊಂದಿರುತ್ತಾರೆ. ಸವಿತಾ ಮಹರ್ಷಿಯಂತಹ ಮಹಾನ್ ವ್ಯಕ್ತಿಗಳ ವಿಚಾರಗಳನ್ನು ತಿಳಿದುಕೊಂಡಾಗ, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬೌದ್ಧಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ.
-ಡಿ ವೇದವ್ಯಾಸ್ ಕಾಮತ್, ಶಾಸಕ