ಸವಿತಾ ಮಹರ್ಷಿ ಜೀವನ ಅನುಸರಿಸಿ: ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್ ಕಿವಿಮಾತು

Savita Maharshi Jayanti Mandya
Published on

ಮಂಡ್ಯ: ಸವಿತಾ ಮಹರ್ಷಿಯ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕರ್ನಾಟಕ ಸಂಘದ ಕೆವಿಎಸ್ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಉದ್ಪಾಟಿಸಿ ಮಾತನಾಡಿದ ಅವರು, ಸವಿತಾ ಮಹರ್ಷಿ ಅವರು ಎಲ್ಲರೂ ಸನ್ಮಾರ್ಗದಲ್ಲಿ ನಡೆಯುವಂತೆ ಹಾಗೂ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ. ಅವರ ಮಾರ್ಗದರ್ಶನ ಮನುಕುಲಕ್ಕೆ ಆದರ್ಶ ಎಂದು ತಿಳಿಸಿದರು.

ವಿಶ್ರಾಂತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರೇಗೌಡ ಮಾತನಾಡಿ, ಧಾರ್ಮಿಕವಾಗಿ ಶಿವನ ಎಡಗಣ್ಣನ್ನು ಚಂದ್ರನಿಗೆ ಬಲಗಣ್ಣನ್ನು ಸೂರ್ಯನಿಗೆ ಹೊಲಿಸಲಾಗುತ್ತದೆ. ಶಿವನ ಬಲಗಣ್ಣಿನಿಂದ ಜನಿಸಿದವನೇ ಸವಿತಾ ಮಹರ್ಷಿ ಎಂದು ಪ್ರತೀತಿ ಇದೆ. ಸವಿತಾ ಸಮಾಜದವರನ್ನು ಸೂರ್ಯ ವಂಶಕ್ಕೆ ಸೇರಿದವರೆಂದು ಹೆಮ್ಮೆಯಿಂದ ಹೇಳಬಹುದು. 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣಅವರಿಗೆ ಆಶ್ರಯ ನೀಡಿದ ದೊರೆ ಸವಿತಾ ಸಮಾಜದ ಬಿಜ್ಜಳ ದೊರೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಸವಿತಾ ಮಹರ್ಷಿ ಸೂರ್ಯನ ನೇರ ಸಂದರ್ಶಕರು. ಸೂರ್ಯನ ಮಾತನ್ನು ಪ್ರತಿಪಾದಿಸಿದವರು. ಚತುರ್ವೇದಗಳಲ್ಲಿ ಒಂದಾದ ಸಾಮವೇದವನ್ನು ಸವಿತಾ ಮಹರ್ಷಿ ಬರೆದಿದ್ದು, ಸಮಾಜಮುಖಿಯಾಗಿ ಬೆಳೆದು ದಾರಿದೀಪವಾಗಿದ್ದಾರೆ. ಇಂತಹ ಮಹಾತ್ಮರ ಜಯಂತಿ ಆಚರಿಸುವ ಮೂಲಕ ಸರ್ಕಾರ ಇವರ ಆದರ್ಶದ ಹಾದಿಯಲ್ಲಿ ನಡೆಯಲು ನಮಗೆ ಬೆಳಕು ತೋರಿಸಿದೆ. ಸವಿತಾ ಸಮಾಜ ಪೌರಾಣಿಕ ಮಹತ್ವ ಹೊಂದಿರುವ ಸಮುದಾಯ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಸಮುದಾಯದ ಮುಖಂಡರಾದ ಕೆಂಪರಾಜು, ಸುರೇಶ್, ಬಸವರಾಜು, ರಾಜಣ್ಣ , ಜಯರಾಂ, ಸಂದೇಶ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net