ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಸವಿತ ಮಹರ್ಷಿ

05 SARAG 1
Published on

ಸರಗೂರು: ಸವಿತ ಮಹರ್ಷಿಗಳು ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಮಹಾನ್ ಪುರುಷ ಎಂದು ಸರಗೂರು ತಹಸೀಲ್ದಾರ್ ಮೋಹನಕುಮಾರಿ ಹೇಳಿದರು.

ಇಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬುಧವಾರ ಆಯೋಜಿಸಿದ್ದ ಸವಿತ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸವಿತ ಮಹರ್ಷಿಗಳು ಸಮಾಜಮುಖಿಯಾಗಿ ಬೆಳೆದು ದಾರಿದೀಪವಾಗಿದ್ದಾರೆ. ಇಂತಹ ಮಹಾತ್ಮರ ಜಯಂತಿ ಆಚರಿಸುವ ಮೂಲಕ ಸರ್ಕಾರ ಇವರ ಆದರ್ಶಗಳ ಹಾದಿಯಲ್ಲಿ ನಡೆಯಲು ನಮಗೆ ಬೆಳಕು ತೋರಿಸಿದೆ. ಸವಿತ ಸಮಾಜದ ಬಂಧುಗಳು ಮಹರ್ಷಿಗಳ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಸವಿತ ಸಮಾಜದ ತಾಲೂಕು ಅಧ್ಯಕ್ಷ ನರಸಿಂಹ ಮಾತನಾಡಿ, ಸವಿತ ಸಮಾಜವು ಹಿಂದುಳಿದಿದ್ದು, ಸರ್ಕಾರದ ಸೌಲಭ್ಯ ಬಳಸಿಕೊಂಡು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಬೆಳೆಯಬೇಕು. ಜತೆಗೆ ಸಹಕಾರ ಸಂಘಗಳ ಮೂಲಕ, ಆರ್ಥಿಕ ಚಟುವಟಿಕೆಗಳ ಮೂಲಕ ಸಂಘಟಿತರಾಗಬೇಕು. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸೇವೆ ಮಾಡುವ ಅವಕಾಶ ಸಿಗಲಿದೆ. ಜತೆಗೆ ತಾವು ಮಾಡುವ ಸೇವೆಯಿಂದ ಆತ್ಮತೃಪ್ತಿ ಲಭಿಸುತ್ತದೆ. ಸವಿತ ಮಹರ್ಷಿಗಳ ತತ್ವ-ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದರು.

ಪದ್ಮಶ್ರೀ ಮಾತನಾಡಿ, ಪೌರಾಣಿಕ ವ್ಯಕ್ತಿಯಾದ ಸವಿತ ಮಹರ್ಷಿ ರಥ ಸಪ್ತಮಿಯ ದಿನ ಜನಿಸಿದರು. ಶಿವನ ಬಲಗಣ್ಣಿನಿಂದ ಜನಿಸಿದವರೇ ಸವಿತ ಮಹರ್ಷಿ ಎಂಬ ನಂಬಿಕೆ ಇದೆ. ಅಪಾರ ಜ್ಞಾನ ಭಂಡಾರ ಹೊಂದಿದ ಮಹರ್ಷಿಗಳು, ನಾಲ್ಕನೇ ವೇದವಾದ ಸಾಮವೇದ ಕೃತಿ ರಚಿಸಿದ್ದಾರೆ ಎಂದು ಹೇಳಿದರು.

ಪ್ರತಿಯೊಂದು ಸಮುದಾಯದವನ್ನು ಗೌರವಿಸಿ, ಆದರ್ಶ ವ್ಯಕ್ತಿಗಳ ತತ್ವಗಳನ್ನು ಮುಂದಿನ ಪೀಳಿಗೆಗೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಯಂತಿಗಳನ್ನು ಆಚರಿಸುತ್ತಿದೆ. ಮಹಾನ್ ವ್ಯಕ್ತಿಗಳ ತತ್ವ, ಸಂದೇಶಗಳು ಸಾರ್ವಕಾಲಿವಾಗಿದ್ದು, ಅದರ ಕೆಲವು ಭಾಗವನ್ನಾದರೂ ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ವೈ.ಡಿ.ರಾಜಣ್ಣ, ಮಾತನಾಡಿದರು. ಸಮಾಜದ ಟೌನ್ ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷ ರಾಜು, ಚಿಕ್ಕ ಯಜಮಾನ ನಿಂಗರಾಜು, ನೂರಳಾಯ್ಯ, ಗಡಿ ಯಜಮಾನ ಚಂದ್ರಶೇಖರ್, ಖಜಾಂಚಿ ಕಾಳಶೆಟ್ಟಿ, ಕುಮಾರ್, ಮಹೇಶ್, ಕಾರ್ಯದರ್ಶಿ ಪ್ರಭಾಕರ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಪಪಂ ಸದಸ್ಯ ಚೈತ್ರಾ ಸ್ವಾಮಿ, ದೈಹಿಕ ಶಿಕ್ಷಣ ಪರಿವಿಕ್ಷಕ ನಾಗೇಂದ್ರಯ್ಯ, ಶ್ರೀನಾಥ್, ಬ್ರಾಹ್ಮಣ ಸಮಾಜದ ಅಧ್ಯಕ್ಷ ಶಾಂಮೂರ್ತಿ, ಉಪತಹಸೀಲ್ದಾರ್ ಸುನೀಲ್, ರವಿಂದ್ರ, ಆರ್‌ಐ ಮುಜೀಬ್, ಶ್ರೀನಿವಾಸ, ಲಯನ್ಸ್ ಅಕಾಡೆಮಿ ಶಾಲೆ ಮುಖ್ಯ ಶಿಕ್ಷಕ ದಾಸಚಾರಿ, ಸುನೀಲ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net