ಮುಗುಳುವಳ್ಳಿ ಗ್ರಾಮ ಪಂಚಾಯಿತಿಗೆ ಸವಿತಾ ಅಧ್ಯಕ್ಷೆ

12 ckm 6 (1)
ಚಿಕ್ಕಮಗಳೂರಿನ ಮುಗುಳುವಳ್ಳಿ ಗ್ರಾಪಂ ಅಧ್ಯಕ್ಷೆಯಾಗಿ ಆಯ್ಕೆಯಾದ ಸವಿತಾ ಅವರನ್ನು ಸಹ ಸದಸ್ಯರು ಹಾಗೂ ಬಿಜೆಪಿ ಮುಖಂಡರು ಅಭಿನಂದಿಸಿದರು. ಎಂ.ಡಿ.ಉಮೇಶ್, ರಘುನಂದನ್, ಟಿ.ಮಲ್ಲೇಶಪ್ಪ ಇದ್ದರು.
Published on

ಚಿಕ್ಕಮಗಳೂರು: ಮುಗುಳುವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನವನ್ನು ಸದಸ್ಯರ ಸಹಕಾರದಿಂದ ಬಿಜೆಪಿ ಬೆಂಬಲಿತ ಪರಿಶಿಷ್ಟ ಜಾತಿ ಮಹಿಳೆ ಎಂ.ಪಿ.ಸವಿತಾಗೆ ಅವಕಾಶ ಕಲ್ಪಿಸಿ ಆಯ್ಕೆಗೊಳಿಸಿದ ಅಪರೂಪದ ಪ್ರಸಂಗ ಶುಕ್ರವಾರ ನಡೆಯಿತು.
ಗ್ರಾಪಂ ಸಭಾಂಗಣದಲ್ಲಿ ಅಧ್ಯಕ್ಷ ಸ್ಥಾನವನ್ನು ಸರ್ವ ಸದಸ್ಯರ ಸಹಕಾರದಿಂದ ಸಾಮಾನ್ಯ ಮಹಿಳೆ ಬದಲಾಗಿ ಎಸ್ಸಿ ಮಹಿಳೆಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಸವಿತಾ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಆರ್.ಶಿವಕುಮಾರ್ ಅವಿರೋಧ ಆಯ್ಕೆ ಘೋಷಿಸಿದರು.
ಬಿಜೆಪಿ ಹಿರಿಯ ಮುಖಂಡ ದೀಪಕ್‌ದೊಡ್ಡಯ್ಯ ಮಾತನಾಡಿ, ಆದರ್ಶ ಗ್ರಾಮ ಎಂದು ಪ್ರಸಿದ್ಧಿ ಪಡೆದ ಮುಗುಳುವಳ್ಳಿ ಗ್ರಾಪಂನಲ್ಲಿ ಅಧಿಕಾರಕ್ಕಾಗಿ ಆಸೆ ಪಡದೇ ಸಮಾನ ಮನಸ್ಥಿತಿ ಹೊಂದಿರುವ ಕಾರಣ ಸಾಮಾನ್ಯ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಬಿಟ್ಟುಕೊಟ್ಟಿರುವುದು ಉತ್ತಮ ಉದಾಹರಣೆಯಾಗಿದೆ. ಕೆಲವು ಗ್ರಾಪಂಗಳಲ್ಲಿ ಯಾವುದೇ ಮೀಸಲಾತಿ ಬಂದರೂ ಅಧಿಕಾರ ಪಡೆಯಲು ಹಲವಾರು ಕಸರತ್ತುಗಳು ನಡೆಯುತ್ತವೆ. ಆದರೆ ಮುಗುಳುವಳ್ಳಿ ಗ್ರಾಪಂ ಇವುಗಳನ್ನು ಮೀರಿ ನಿಂತಿರುವುದು ಹೆಮ್ಮೆಯ ಸಂಗತಿ. ಹೀಗಾಗಿ ಸಿಕ್ಕ ಅವಕಾಶದಲ್ಲಿ ನೂತನ ಅಧ್ಯಕ್ಷರು ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಜನ ಮನ್ನಣೆಗಳಿಸಬೇಕು ಎಂದರು.
ಗ್ರಾಪಂ ಉಪಾಧ್ಯಕ್ಷ ಎಂ.ಡಿ.ಉಮೇಶ್, ಮಾಜಿ ಅಧ್ಯಕ್ಷ ರಘುನಂದನ್, ಸದಸ್ಯರಾದ ಟಿ.ಮಲ್ಲೇಶಪ್ಪ, ಬಿ.ಎಸ್.ಶೇಖರ್, ವನಿತ, ಎಂ.ಟಿ.ಭಾಗ್ಯ, ಶೃತಿ, ಎಸ್.ಕಲಾವತಿ, ಬಿಜೆಪಿ ಓಬಿಸಿ ಪ್ರಧಾನ ಕಾರ್ಯದರ್ಶಿ ರಾಜುಮಣೇನಹಳ್ಳಿ, ಮಹಾಶಕ್ತಿ ಕೇಂದ್ರದ ಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಧರ್ಮಯ್ಯ, ಪಿಡಿಒ ಜಿ.ಪಿ.ಸುಮಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net