

ಹುಬ್ಬಳ್ಳಿ: ಈ ಬಾರಿಯ ವಿಭಾ ಸಾಹಿತ್ಯ ಪ್ರಶಸ್ತಿಯು ಸವಿರಾಜ್ ಆನಂದೂರು ಅವರ "ಗಂಡಸರನ್ನು ಕೊಲ್ಲಿರಿ' ಎಂಬ ಕವನ ಸಂಕಲನಕ್ಕೆ ದೊರೆತಿದೆ.
ಕವಿ, ವಿಮರ್ಶಕ ಡಾ. ಸಬೀಹಾ ಭೂಮಿಗೌಡ ಮತ್ತು ಡಾ. ಚಂದ್ರಶೇಖರ ತಾಳ್ಯ ಅವರು ಈ ಕೃತಿ ಆಯ್ಕೆ ಮಾಡಿದ್ದಾರೆ.
ನಿರೂಪಣೆಯ ಹೊಸತನ, ಸೂಕ್ಷ$್ಮ ವ್ಯಂಗ್ಯ. ಕಟಕಿ, ಬೆರಗುಗೊಳಿಸುವ ವಿಪರ್ಯಾಸದ ವಿನ್ಯಾಸಗಳನ್ನು ಹೆಣೆಯುತ್ತಾ ವಿರುದ್ಧ ದಿಕ್ಕಿನಲ್ಲಿ ಸಾಗಿ ಸರಿದಾರಿಗೆ ಬಂದಂತೆ ಮಾಡುವ ಗ್ರಹಿಕೆಯ ಕ್ರಮ, ಗದ್ಯಗಂಧೀ ಲಯದಲ್ಲೇ ಪರವಶಗೊಳಿಸುವಂತಿರುವ ಶೈಲಿ ಗಮನ ಸೆಳೆಯುವ ಕಾರಣಕ್ಕೆ ಈ ಕೃತಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಪುರಸ್ಕಾರವು ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಲಕ ಒಳಗೊಂಡಿದೆ.
1987ರಲ್ಲಿ ಆಗುಂಬೆ ಸಮೀಪದ ಆನಂದೂರಿನಲ್ಲಿ ಜನಿಸಿದ ಸವಿರಾಜ್ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವೀಧರರು. ಹವ್ಯಾಸಿ ತಾಳಮದ್ದಲೆ ಅರ್ಥಧಾರಿ, ರಂಗಭೂಮಿ ಕಲಾವಿದರು.
ಪ್ರಸ್ತುತ ಬೆಂಗಳೂರಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವು ಕಥಾಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ. ಬ್ಲೂಬುಕ್ ಹಾಗೂ ನತ್ರಕಡ್ಡಿ ಅವರ ಈ ವರೆಗಿನ ಪ್ರಕಟಿತ ಕೃತಿಗಳು ಎಂದು ವಿಭಾ ಸಾಹಿತ್ಯ ಪ್ರಶಸ್ತಿ ಸಂಚಾಲಕರಾದ ಸುನಂದಾ ಪ್ರಕಾಶ ಕಡಮೆ ತಿಳಿಸಿದ್ದಾರೆ.