ವಿಜಯಪುರ :ಹಣ ಗಳಿಕೆಗಿಂತ ಉಳಿತಾಯ ಮುಖ್ಯ

vvvv
ವಿಜಯಪುರ ನಗರದ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಆರ್ಥಿಕ ಶಿಕ್ಷಣ ಮತ್ತು ಹೂಡಿಕೆಯ ಅರಿವು’ ಕುರಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಡಾ.ಸುಚೀಂದ್ರ.ಜಿ.ಆರ್. ರಾಘವೇಂದ್ರ ಎಸ್., ಪ್ರೊ.ಎಸ್.ಜಿ.ರೊಡಗಿ, ಡಾ.ಎಂ.ಜಯಪ್ಪ ಮತ್ತಿತರರಿದ್ದರು.
Published on

ವಿಜಯಪುರ : ಹಣ ಗಳಿಕೆ ಎಷ್ಟು ಅವಶ್ಯವೋ ಅದರಂತೆ ಹಣದ ಉಳಿತಾಯವೂ ಅಷ್ಟೇ ಮುಖ್ಯ. ಇಂದಿನ ಉಳಿತಾಯವೇ ಮುಂದಿನ ಭವಿಷ್ಯಕ್ಕೆ ಆಧಾರ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಿ.ಎಸ್.ನಾವಿ ಹೇಳಿದರು.

ನಗರದ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್, ರಾಷ್ಟ್ರೀಯ ಷೇರು ವಿನಿಮಯ ಅಕಾಡೆಮಿ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಆರ್ಥಿಕ ಶಿಕ್ಷಣ ಮತ್ತು ಹೂಡಿಕೆಯ ಅರಿವು’ ವಿಷಯ ಕುರಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ನಾವು ಹಣವನ್ನು ನಿಯಮಿತವಾಗಿ, ಕ್ರಮಬದ್ಧ್ದವಾಗಿ ತೊಡಗಿಸಬೇಕು. ಯುವಕರಲ್ಲಿ ಆರ್ಥಿಕ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ಹಾಗೂ ಅರಿವನ್ನುಂಟು ಮಾಡಬೇಕಿದೆ ಎಂದರು.

ಪ್ರಸ್ತುತ ದಿನಗಳಲ್ಲಿ ಆರ್ಥಿಕ ಶಿಕ್ಷಣದ ಅವಶ್ಯಕತೆ ಬಹಳಷ್ಟಿದೆ. ಆರ್ಥಿಕ ಶಿಕ್ಷಣವು ಇಂದು ವ್ಯಕ್ತಿಯ ಜೀವನದ ಕೌಶಲಗಳಲ್ಲಿ ಒಂದಾಗಿ ಬೆರತಿದೆ. ಮಾನವನಿಗೆ ರಕ್ತ ಎಷ್ಟು ಮುಖ್ಯವೋ ಹಾಗೇ ವ್ಯವಹಾರದಲ್ಲಿ ಹಣವು ರಕ್ತವಿದ್ದಂತೆ. ಹಣಕಾಸು ಇಲ್ಲದೆ ಜೀವನ ನಿರ್ವಹಣೆ ಕಷ್ಟ ಎಂದು ತಿಳಿಸಿದರು.

ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ವಿಶೇಷ ಅಧಿಕಾರಿ ಡಾ.ಎಂ.ಜಯಪ್ಪ ಮಾತನಾಡಿ, ಹೊಸ ಶಿಕ್ಷಣ ನೀತಿಯಲ್ಲಿ ಪ್ರಾಯೋಗಿಕ ಆಧಾರಿತ ಕೌಶಲ ಆಧಾರಿತ ಪಠ್ಯಕ್ರಮವನ್ನು ಅಳವಡಿಸಿದ್ದು ಸ್ವಾಗತಾರ್ಹ. ಸ್ವತಃ ಉನ್ನತ ಶಿಕ್ಷಣ ಇಲಾಖೆಯೇ ಹಣಕಾಸು ಶಿಕ್ಷಣ ಹಾಗೂ ಹೂಡಿಕೆಯ ಕುರಿತು ಅರಿವನ್ನುಂಟು ಮಾಡುವಲ್ಲಿ ಪ್ರಾಶಸ್ತ್ಯವನ್ನು ನೀಡಿದೆ ಎಂದರು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಸ್.ಜಿ.ರೊಡಗಿ, ಪ್ರತಿಯೊಂದು ಕುಟುಂಬವು ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗಳೆಂಬ ಎರಡು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಜೀವನದಲ್ಲಿ ಹಣದ ವಿನಿಯೋಗದ ಪಾತ್ರ ಬಹಳಷ್ಟಿದ್ದು, ಒಂದು ವೇಳೆ ನಮ್ಮಲ್ಲಿ ಸ್ವಲ್ಪವೇ ಹಣವಿದ್ದರೂ ಅದನ್ನು ಸರಿಯಾದ ವ್ಯವಸ್ಥೆಯಲ್ಲಿ ಅಥವಾ ಅಧಿಕೃತ ಸಂಸ್ಥೆಯಲ್ಲಿ ಹೂಡಿಕೆ ಮಾಡಬೇಕು. ಹಣಕಾಸು ನಿರ್ವಹಣೆಯ ಕೌಶಲವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎ್.ಡಿ.ಪಿ. ಸಂಯೋಜಕ ಡಾ.ಸುಚೀಂದ್ರ.ಜಿ.ಆರ್. ಅವರು ತರಬೇತಿ ಕಾರ್ಯಾಗಾರದ ಧೇಯೋದ್ದೇಶಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಷ್ಟ್ರೀಯ ಷೇರು ವಿನಿಮಯ ಅಕಾಡೆಮಿಯ ಉಪ ವ್ಯವಸ್ಥಾಪಕ ರಾಘವೇಂದ್ರ ಎಸ್., ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಐ.ಬಿ.ಚಿಪ್ಪಲಕಟ್ಟಿ, ಉಪನ್ಯಾಸಕ ಅಶ್ವಿನ್ ಪಾಟೀಲ, ಪ್ರೊ.ಪಿ.ಎಸ್.ತೋಳನೂರ, ಪ್ರೊ.ಭಕ್ತಿ ಮಹೀಂದ್ರಕರ, ಡಾ.ಮುರಗೇಶ ಪಟ್ಟಣಶೆಟ್ಟಿ, ಪ್ರೊ.ಎಸ್.ಎ.ಪಾಟೀಲ, ಡಾ.ಮಹಾನಂದ ಪಾಟೀಲ, ಪ್ರೊ.ಕೆ.ಐ.ಹಿರೇಮಠ, ಡಾ.ಅಶ್ವಿನಿ ಯರನಾಳ, ಪ್ರದೀಪ ಕುಂಬಾರ, ರವಿ ಚವ್ಹಾಣ, ಎ.ಎಂ.ತುಪ್ಪದ, ತೇಜಶ್ವಿ ಹಿಬಾರೆ, ಅಶ್ವಿನಿ ಜಾಧವ ಹಾಗೂ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಸ್ನಾತಕ ಪದವಿ ಕಾಲೇಜುಗಳ ಉಪನ್ಯಾಸಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net