ಅಂಬೇಡ್ಕರ್​ ಜಾತಿಗೆ ಸೀಮಿತಗೊಳಿಸಲು ಕಾಂಗ್ರೆಸ್​ ಪ್ರಯತ್ನ

udp-11-annamalai book
Published on

ಉಡುಪಿ: ಜೀವಿತಾವಧಿಯಲ್ಲಿ ಅಂಬೇಡ್ಕರ್​ ಅವರಿಗೆ ಬಹಳಷ್ಟು ಅವಮಾನ ಮಾಡಿದ ಕಾಂಗ್ರೆಸ್​ ಒಂದು ಜಾತಿಗೆ ಸೀಮಿತಗೊಳಿಸಲು ಪ್ರಯತ್ನಿಸಿದೆ. ಮಹಾನ್​ ನಾಯಕನಿಗೆ ಸಲ್ಲಬೇಕಾದ ನೈಜ ಗೌರವವನ್ನು ನೀಡಲಿಲ್ಲ.ಪ್ರಸ್ತುತ ಅಂಬೇಡ್ಕರ್​ ಹೆಸರಿನಲ್ಲಿ ಓಟ್​ಬ್ಯಾಂಕ್​ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.

ಶನಿವಾರ ಪುರಭವನದಲ್ಲಿ ಸಿಟಿಜನ್ಸ್​ ಫಾರ್​ ಸೋಷಿಯಲ್​ ಜಸ್ಟಿಸ್​ ಸಂಸ್ಥೆ ಆಯೋಜಿಸಿದ್ದ ಸಂವಿಧಾನ ಸಮ್ಮಾನ್​ ಅಭಿಯಾನದಲ್ಲಿ "ಸಂವಿಧಾನ ಬದಲಾಯಿಸಿದ್ದು ಯಾರು' ಎಂಬ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಸಂವಿಧಾನದ 106 ತಿದ್ದುಪಡಿಗಳಲ್ಲಿ ಮೋದಿಯವರು ಮಾಡಿದ 8 ಸಂವಿಧಾನ ತಿದ್ದುಪಡಿಗಳು ಅಂಬೇಡ್ಕರ್​ ಆಶಯಕ್ಕೆ ವಿರೋಧವಾಗಿಲ್ಲ. ಕಾಂಗ್ರೆಸ್​ ಅಧಿಕಾರ ಉಳಿಸಿಕೊಳ್ಳಲು ಸಂವಿಧಾನಕ್ಕೆ ತಿದ್ದುಪಡಿಗಳನ್ನು ಮಾಡಿದೆ. ಸಂವಿಧಾನವನ್ನು ಉಳಿಸುವುದು ಮಾತ್ರವಲ್ಲದೆ ಅದನ್ನು ಬಲಪಡಿಸಬೇಕು. ಇದುವರೆಗೆ ಇತಿಹಾಸದ ಪುಸ್ತಕಗಳಲ್ಲಿ ಅಂಬೇಡ್ಕರ್​ ಅವರಿಗೆ ಅನ್ಯಾಯ ಮಾಡಲಾಗಿದೆ. ನೈಜ ಇತಿಹಾಸವನ್ನು ಮುಚ್ಚಿಡಲಾಗಿತ್ತು. ಇಂದಿನ ಮುಂದಿನ ಪೀಳಿಗೆಗೆ ಇತಿಹಾಸದ ಬಗ್ಗೆ ತಿಳಿಸುವ ಅವಶ್ಯಕತೆ ಇದೆ. ಸಂವಿಧಾನ ಬಿಟ್ಟು ಬದುಕು, ಭವಿಷ್ಯ ಇಲ್ಲ ಎಂದವರು ಹೇಳಿದರು.

31ಡಿ ತಿದ್ದುಪಡಿಗೆ ಕೈ ಹಾಕಿದ್ದ ಕಾಂಗ್ರೆಸ್​

ಇಂದಿರಾ ಗಾಂಧಿಯವರು ಸಂವಿಧಾನಕ್ಕೆ 31ಡಿ ಕಾಲಂ ಸೇರ್ಪಡೆ ಮಾಡಲು ನಿರ್ಧರಿಸಿದ್ದರು. ಇದರಿಂದ ಹಿಂದೂ ಧರ್ಮಕ್ಕಾಗಿ ದುಡಿಯುವ ಇಸ್ಕಾನ್​, ಬ್ರಹ್ಮಕುಮಾರಿ ಮೊದಲಾ ಸಂಸ್ಥೆಗಳನ್ನು ನಿಷೇಧಿಸುವ ಹುನ್ನಾರ ನಡೆಸಿದ್ದರು. ಅದೃಷ್ಟವಶಾತ್​ ಈ ಮಸೂದೆ ಸಂಸತ್​ನಲ್ಲಿ ಪಾಸ್​ ಆಗಲಿಲ್ಲ. ಹೀಗಾಗಿ ಜನರು ಕಾಂಗ್ರೆಸ್​ನ ಮಾನಸಿಕತೆಯನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಚ್ಚೂರು ಮಾಲ್ತಿದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಗೋಕುಲ್​ ದಾಸ್​ ಬಾರ್ಕೂರು ವಹಿಸಿದ್ದರು. ಸಂವಿಧಾನ ಸಮ್ಮಾನ್​ ಅಭಿಯಾನದ ವಿಭಾಗ ಸಂಚಾಲಕ ಕಿದಿಯೂರು ಉದಯ್​ ಕುಮಾರ್​ ಶೆಟ್ಟಿ ಉಪಸ್ಥಿತರಿದ್ದರು.

ಸಂವಿಧಾನ ಸಮ್ಮಾನ್​ ಅಭಿಯಾನದ ಜಿಲ್ಲಾ ಸಂಚಾಲಕಿ ರೇಶ್ಮಾ ಉದಯ್​ ಶೆಟ್ಟಿ ಸ್ವಾಗತಿಸಿದರು. ರತ್ನಾಕರ್​ ಇಂದ್ರಾಳಿ ನಿರೂಪಿಸಿದರು. ಉಮೇಶ್​ ನಾಯ್ಕ ಸಂವಿಧಾನ ಪೀಠಿಕೆ ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net