

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಹೆಚ್ಚುವರಿ ವಿಷಯಗಳ ಪಟ್ಟಿಯನ್ನು ಚರ್ಚೆಗೆ ತೆಗೆದುಕೊಳ್ಳಬೇಕೆಂಬ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ವಾದ ಉಂಟಾದ ಪರಿಣಾಮ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಮೊಟಕುಗೊಳಿಸಲಾಯಿತು. ಆದರೂ, ಚರ್ಚೆ ಇಲ್ಲದೆ ಎಲ್ಲ ವಿಷಯಗಳಿಗೂ ಅಂಗೀಕಾರ ನೀಡಲಾಗಿದೆ.
ಶನಿವಾರ ಕರೆದ ಪಾಲಿಕೆ ಸಾಮಾನ್ಯ ಸಭೆಯು ಈ ವಿಷಯವಾಗಿ ಸದಸ್ಯರ ನಡುವೆ ಪರಸ್ಪರ ಗದ್ದಲ, ಮಾತಿನ ಚಕಮಕಿಗೆ ಸಾಕ್ಷಿಯಾಯಿತು.
ಮೇಯರ್ ಅವರು ತಮ್ಮ ವಿವೇಚನೆ ಮೇರೆಗೆ ತುರ್ತು ವಿಷಯಗಳನ್ನು ಹೆಚ್ಚುವರಿ ವಿಷಯವನ್ನಾಗಿ ಚರ್ಚೆಗೆ ತೆಗೆದುಕೊಳ್ಳಲು ಅವಕಾಶವಿದೆ ಎಂದು ಸಭಾನಾಯಕ ಶಿವು ಹಿರೇಮಠ, ತಿಪ್ಪಣ್ಣ ಮಜ್ಜಗಿ ಹಾಗೂ ಬಿಜೆಪಿ ಸದಸ್ಯರು ವಾದಿಸಿದರು. ಪ್ರತಿ ಬಾರಿ ಸಭೆಯಲ್ಲಿ ಕೊನೆ ಕ್ಷಣದಲ್ಲಿ ಹೆಚ್ಚುವರಿ ವಿಷಯಗಳನ್ನು ಸಭೆಗೆ ಮಂಡಿಸಲಾಗುತ್ತದೆ. ಹಾಗಾಗಿ ಈ ಬಾರಿ ಹೆಚ್ಚುವರಿ ವಿಷಯಗಳನ್ನು ಸಭೆಯಲ್ಲಿ ಚರ್ಚೆಗೆ ತೆಗೆದುಕೊಳ್ಳಬಾರದು ಎಂದು ವಿರೋಧ ಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲ ಹಾಗೂ ಇತರರು ಆಗ್ರಹಿಸಿದರು.
ಹೆಚ್ಚುವರಿ ವಿಷಯಗಳನ್ನು ಚರ್ಚೆಯಿಂದ ಕೈ ಬಿಡಬೇಕು ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದಿದ್ದರು. ವಾಗ್ವಾದ ತೀವ್ರಗೊಳ್ಳುತ್ತಿದ್ದಂತೆ ಮೇಯರ್ ಪೀಠದ ಬಳಿ ತೆರಳಿ ವಿರೋಧ ಪಕ್ಷದ ಸದಸ್ಯರು ಘೊಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಹೆಚ್ಚುವರಿ ವಿಷಯ ಬೇಕೇ ಬೇಕು...ನ್ಯಾಯ ಬೇಕು ಎಂದು ಆಡಳಿತಾರೂಢ ಬಿಜೆಪಿ ಸದಸ್ಯ ಘೊಷಣೆ ಕೂಗಿದರು. ಈ ಹಂತದಲ್ಲಿ ಮೇಯರ್ ವೀಣಾ ಬರದ್ವಾಡ ಸಭೆಯನ್ನು ಕೆಲ ನಿಮಿಷ ಮುಂದೂಡಿದರು.
ಗದ್ದಲ ಮಾಡುವ ಉದ್ದೇಶದಿಂದಲೇ ಕಲ್ಲಕುಂಟ್ಲ ಸಭೆಗೆ ಬರುತ್ತಾರೆ. ಎಲ್ಲ ವಿಷಯಗಳನ್ನು ಪಾಸ್ ಮಾಡಿ ಸಭೆ ಮುಗಿಸಿ ಎಂದು ಬಿಜೆಪಿ ಸದಸ್ಯರು ವಾದಿಸಿದರು. ಅದರಂತೆ, ಅಲ್ಲ ವಿಷಯಗಳು ಪಾಸ್ ಆಗಿವೆ ಎಂದು ಮೇಯರ್ ರೂಲಿಂಗ್ ನೀಡಿ ಸಭೆಯನ್ನು ಮೊಟಕುಗೊಳಿಸಿದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ 39 ಗುಂಟೆ ಜಾಗ, ಕೇಂದ್ರ ಸರ್ಕಾರದ ಸಿಟಿಸ್ ಕಾರ್ಯಕ್ರಮದಡಿ ಬಿಡುಗಡೆಯಾಗುವ 135 ಕೋಟಿ ರೂ. ಅನುದಾನದಲ್ಲಿ ಪಾಲಿಕೆ ವಂತಿಗೆ ಶೇ. 20 ರಷ್ಟು (26.80 ಕೋಟಿ ರೂ.) ಭರಿಸುವ, ಮಿಲಿಯನ್ ಪ್ಲಸ್ ಸಿಟಿ ಯೋಜನೆಯಡಿ ಬಿಬಿಎಂಪಿ ಯಿಂದ ಪಾಲಿಕೆಗೆ ಮರು ಹಂಚಿಕೆಯಾದ 16.74 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳುವ ಕಾಮಗಾರಿಗಳ ಕ್ರಿಯಾ ಯೋಜನೆ ಸೇರಿ 9 ಹೆಚ್ಚುವರಿ ವಿಷಯಗಳು ಹಾಗೂ 8 ಪ್ರಸ್ತಾಪಿತ ವಿಷಯಗಳು ಚರ್ಚೆ ಇಲ್ಲದೇ ಅಂಗೀಕಾರ ಪಡೆದುಕೊಂಡವು.